ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವು ಆರರಿಂದ ಹತ್ತನೇ ತರಗತಿಯವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯವನ್ನು ಪರಿಷ್ಕರಿಸಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಳವಡಿಸಿದ್ದ ಹಲವು ವಿವಾದಾತ್ಮಕ ಪಠ್ಯಗಳನ್ನು ಕೈ ಬಿಟ್ಟು ಪಠ್ಯ ಪುಸ್ತಕ ಪರಿಷ್ಕರಿಸಲಾಗಿದೆ.
ಯಾವೆಲ್ಲ ಪಠ್ಯ ಬದಲಾವಣೆ?
– ಆರನೇ ತರಗತಿಯ ಪ್ರಥಮ ಭಾಷೆಯ ನಿರ್ಮಲಾ ಸುರತ್ಕಲ್ ಅವರ ಪದ್ಯ “ನಮ್ಮದೇನಿದೆ?”ಯನ್ನು ಕೈಬಿಟ್ಟು ಚೆನ್ನಣ್ಣ ವಾಲೀಕಾರ ಬರೆದಿರುವ “ನೀ ಹೋದ ಮರುದಿನ’ವನ್ನು ಸೇರಿಸಲಾಗಿದೆ.
-ಏಳನೇ ತರಗತಿಯ ರಮಾನಂದ ಆಚಾರ್ಯ ಬರೆದಿರುವ “ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ’ ಪೂರಕ ಗದ್ಯವನ್ನು ಕೈಬಿಟ್ಟು ಡಾ| ಎಚ್.ಎಸ್. ಅನುಪಮಾ ಅವರ “ಸಾವಿತ್ರಿಬಾಯಿ ಫುಲೆ” ಸೇರಿಸಲಾಗಿದೆ.
– ಎಂಟನೇ ತರಗತಿಯ ಪಾರಂಪಳ್ಳಿ ನರಸಿಂಹ ಐತಾಳ ಬರೆದಿರುವ ಪೂರಕ ಗದ್ಯ “ಭೂ ಕೈಲಾಸ” ಪೌರಾಣಿಕ ನಾಟಕವನ್ನು ತೆಗೆದು ಹಾಕಿ ಜವಾಹರಲಾಲ್ ನೆಹರೂ ಬರೆದಿರುವ ತಿ.ತಾ. ಶರ್ಮ, ಸಿದ್ಧನಹಳ್ಳಿ ಕೃಷ್ಣಶರ್ಮ ಅವರ “ಮಗಳಿಗೆ ಬರೆದ ಪತ್ರ’ ಸೇರ್ಪಡೆ ಮಾಡಲಾಗಿದೆ.
– ಎಂಟನೇ ತರಗತಿಯ ದ್ವಿತೀಯ ಭಾಷೆಯಲ್ಲಿನ ಕೆ.ಟಿ. ಗಟ್ಟಿ ಬರೆದಿರುವ “ಕಾಲವನ್ನು ಗೆದ್ದವರು” ಗದ್ಯವನ್ನು ಕೈಬಿಟ್ಟು ವಿಜಯಮಾಲಾ ರಂಗನಾಥ್ ಅವರ “ಬ್ಲಿಡ್‌ಗ್ರೂಪ್” ಗದ್ಯ ಸೇರಿಸಲಾಗಿದೆ.
– ಒಂಬತ್ತನೇ ತರಗತಿಯ ದ್ವಿತೀಯ ಭಾಷೆಯಲ್ಲಿನ ಪಿ. ಸತ್ಯನಾರಾಯಣ ಭಟ್ ಬರೆದಿರುವ “ಅಚ್ಚರಿಯ ಜೀವಿ ಇಂಬಳ”ಕ್ಕೆ ಕೊಕ್ ಕೊಟ್ಟು ದಸ್ತಗೀರ ಅಲ್ಲೀಭಾಯಿ ಅವರ “ಉರೂಸುಗಳಲ್ಲಿ ಭಾವೈಕ್ಯ’ ಗದ್ಯ ಸೇರಿಸಲಾಗಿದೆ.
– ಹತ್ತನೇ ತರಗತಿಯಲ್ಲಿ ಕೇಶವ ಬಲಿರಾಮ ಹೆಡಗೇವಾರ್ ಬರೆದಿರುವ “ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಗದ್ಯವನ್ನು ಕೈಬಿಟ್ಟು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿಯ ಕಥೆ” ಸೇರಿಸಲಾಗಿದೆ.
– ಹತ್ತನೇ ತರಗತಿಯಲ್ಲಿ ಶತಾವಧಾನಿ ಡಾ| ಆರ್. ಗಣೇಶ್ ಬರೆದಿರುವ “ಶ್ರೇಷ್ಠ ಭಾರತೀಯ ಅಮರ ಚಿಂತನೆಗಳು” ಗದ್ಯವನ್ನು ಕೈಬಿಟ್ಟು ಸಾ.ರಾ. ಅಬೂಬಕ್ಕರ್ ಅವರ “ಯುದ್ಧ” ಸೇರ್ಪಡೆ ಮಾಡಲಾಗಿದೆ.
– ಹತ್ತನೇ ತರಗತಿಯಲ್ಲಿದ್ದ ಚಕ್ರವರ್ತಿ ಸೂಲಿಬೆಲೆಯ “ತಾಯಿ ಭಾರತೀಯ ಅಮರ ಪುತ್ರರು” ಪೂರಕ ಗದ್ಯವನ್ನು ಪೂರ್ಣವಾಗಿ ಕೈ ಬಿಡಲಾಗಿದೆ.
– ಹತ್ತನೇ ತರಗತಿಯಲ್ಲಿದ್ದ ಲಕ್ಷ್ಮೀಶ ಕವಿಯ “ವೀರಲವ” ಪದ್ಯದ ಟಿಪ್ಪಣಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಪರಿಚಯ ತಿದ್ದುಪಡಿ ಮಾಡಲಾಗಿದೆ.
6,7 ಹಾಗೂ 10ನೇ ತರಗತಿಗೆ ಸಮಾಜ ವಿಜ್ಞಾನ ಪಠ್ಯದಲ್ಲಿ ಕೆಲವು ಬದಲಾವಣೆ
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 6,7 ಹಾಗೂ 10ನೇ ತರಗತಿಗೆ ಜಾರಿಯಲ್ಲಿರುವ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳಿಗೆ ಸಂಬಂಧಿಸಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅವು ಇಂತಿವೆ.
*6ನೇ ತರಗತಿ ಸಮಾಜ ವಿಜ್ಞಾನ ಭಾಗ-1 -“ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಎಂಬ ಅಧ್ಯಾಯ ಪುಟ ಸಂಖ್ಯೆ 33ರಲ್ಲಿ ಕಲಬುರಗಿ ವಿಭಾಗದ ವಿಷಯಾಂಶ ಬೋಧಿಸುವಾಗ “ಈ ವಿಭಾಗದ ಜಿಲ್ಲೆಗಳಿಗೆ ವಿಶೇಷ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ’ ಎಂಬ ವಾಕ್ಯ ಸೇರ್ಪಡೆ ಮಾಡಲಾಗಿದೆ.
-“ವೇದಕಾಲ ಸಂಸ್ಕೃತಿ’ ಹಾಗೂ ಹೊಸ ಧರ್ಮಗಳ ಉದಯ ಎಂಬ ಹೊಸ ಅಧ್ಯಾಯಗಳ ಸೇರ್ಪಡೆ.
*6ನೇ ತರಗತಿ ಸಮಾಜ ವಿಜ್ಞಾನ ಭಾಗ-2- ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ಅಧ್ಯಾಯದ ಜತೆಗೆ “ಮಾನವ ಹಕ್ಕುಗಳು’ ಎಂಬ ವಿಷಯಾಂಶ ಹೊಸದಾಗಿ ಸೇರ್ಪಡೆ.
*7ನೇ ತರಗತಿ ಸಮಾಜ ವಿಜ್ಞಾನ ಭಾಗ-1- ಜಗತ್ತಿನ ಪ್ರಮುಖ ಘಟನೆಗಳು ಎಂಬ ಅಧ್ಯಾಯದಲ್ಲಿ ಎಲ್ಲೆಲ್ಲಿ “ರಿಲಿಜನ್’ ಎಂದು ಬಂದಿದೆಯೋ ಅಲ್ಲೆಲ್ಲ “ಧರ್ಮ’ ಎಂದು ಬದಲಾವಣೆ.
-ಮೈಸೂರು ಮತ್ತು ಇತರ ಸಂಸ್ಥಾನಗಳು ಎಂಬ ಅಧ್ಯಾಯದ ಜತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್, ಕಮಿಷನರ್‌ಗಳ ಆಡಳಿತ, ಹತ್ತನೆಯ ಚಾಮರಾಜ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಈ ವಿಷಯಾಂಶಗಳ ಸೇರ್ಪಡೆ.
*7ನೇ ತರಗತಿ ಸಮಾಜ ವಿಜ್ಞಾನ ಭಾಗ-2- “ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಎಂಬ ಅಧ್ಯಾಯದ ಜತೆಗೆ “ಮಹಿಳಾ ಸಮಾಜ ಸುಧಾರಕಿಯರು’ ಎಂಬ ವಿಷಯಾಂಶಗಳ ಸೇರ್ಪಡೆ.
-“ಸ್ವಾತಂತ್ರ್ಯ ಸಂಗ್ರಾಮ’ ಎಂಬ ಅಧ್ಯಾಯದ ಜತೆಗೆ “ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ವಿಷಯಾಂಶಗಳ ಸೇರ್ಪಡೆ.
*10ನೇ ತರಗತಿ ಸಮಾಜ ವಿಜ್ಞಾನ ಭಾಗ-1- “ಭಾರತಕ್ಕಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು’ ಎಂಬ ಅಧ್ಯಾಯದ ಪ್ರಾದೇಶಿಕವಾದ ಎಂಬ ಉಪ ಶೀರ್ಷಿಕೆ ಅಡಿಯಲ್ಲಿ “ಭಾಷಾಭಿಮಾನವು ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವ ಬೆಳೆಸುತ್ತದೆ. ಪ್ರಾದೇಶಿಕ ವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿನ ತೆಲಂಗಾಣ ಭಾಗದ ಪ್ರಾದೇಶಿಕವಾದದ ಹೋರಾಟ ಗಮನಿಸಬಹುದು. ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡ ದೇಶದ ಅಭಿವೃದ್ಧಿಗೆ ತೊಡಕಾಗುವ ಸಾಧ್ಯತೆಗಳಿವೆ. ಇಂತಹ ಸಂಕುಚಿತ ಪ್ರಾದೇಶಿಕ ವಾದವನ್ನು ದೂರೀಕರಿಸಲು ನಮ್ಮ ಭಾರತ ಸಂವಿಧಾನವೇ ಹಲವಾರು ಮಾರ್ಗಗಳನ್ನು ಸೂಚಿಸಿದೆ’ ಎಂಬ ವಾಕ್ಯಗಳನ್ನು ಕೈ ಬಿಡಲಾಗಿದೆ.