ಕಡಬ: ಹಿಂದೂ ಸಮಾಜ ಎಂಬುದು ಒಂದು ಆಲದ ಮರ. ಆ ಮರದ ರೆಂಬೆ ಕೊಂಬೆಗಳು ಇತರ ಸಮುದಾಯ. ಈ ನಿಟ್ಟಿನಲ್ಲಿ ಆಲದ ಮರದ ರೆಂಬೆಕೊಂಬೆಗಳು ಗಟ್ಟಿಯಾಗಿದ್ದರೆ ಸಮಾಜ ಉಳಿಯಲು ಸಾಧ್ಯ. ಹಾಗೆಯೇ ಇತರ ಸಮುದಾಯ ಬಲಿಷ್ಟವಾದರೆ ಹಿಂದೂ ಸಮುದಾಯ ಗಟ್ಟಿಯಾಗಿರಲು ಸಾಧ್ಯ. ಈ ಪೈಕಿ ಗೌಡ ಸಮುದಾಯ ಒಂದಾಗಿದ್ದು, ಸಂಘಟನಾತ್ಮಕವಾಗಿ ಬೆಳೆಯಬೇಕಿದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.
ಜೂನ್ 18 ರಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಕಡಬ ಗೌಡ ಸಂಘದ ಸಭಾಭವನದಲ್ಲಿ ನಡೆದ ಕಡಬ ತಾಲೂಕು ಊರ ಗೌಡರ ಸಮಾವೇಶ “ಮುಕುಟ” ಗೌಡ ಸಾರಥ್ಯ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸವಣೂರು ವಿದ್ಯಾರರ್ಶಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ದಿಕ್ಸೂಚಿ ಭಾಷಣ ಮಾಡಿದರು. ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸುಳ್ಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೊಲ್ಚಾರು ಶುಭಾಶಂಸನೆ ಮಾಡಿದರು.
ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಶಿವರಾಮ ಏನೆಕಲ್ಲು, ಸಂಘದ ಸದಸ್ಯ, ಮಹಾಪೋಷಕ ಕೇಶವ ಅಮೈ, ಕಡಬ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಕೋಡಿಬೈಲು, ಕಡಬ ವಲಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ಕಾರ್ಯದರ್ಶಿ ಪ್ರಶಾಂತ ಪಂಜೊಡಿ ಕಡಬ ಉಪಸ್ಥಿತರಿದ್ದರು.