ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಸೋಮವಾರ ಪ್ರಕಟಿಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಕಲ್ಪಿಸಿದೆ.
ನಿರೀಕ್ಷೆಯಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್. ಬೋಸರಾಜು ಅವರ ಹೆಸರನ್ನು ಘೋಷಿಸಲಾಗಿದೆ. ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಜೂನ್ 30 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ. ಜೂನ್ 20( ಮಂಗಳವಾರ) ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಜೂನ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ. ಜೂನ್ 30 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಸಂಖ್ಯಾಬಲದ ಆಧಾರದಲ್ಲಿ ಮೂವರೂ ಆಯ್ಕೆಯಾಗುವುದು ಖಚಿತ.
ಬಿಜೆಪಿಯಿಂದ ಸದಸ್ಯರಾಗಿದ್ದ ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ಅವರು ವಿಧಾನಸಭೆ ಚುನಾವಣೆಗೆ ಪಕ್ಷಾಂತರ ಮಾಡಿ ಸ್ಪರ್ಧಿಸುವ ಸಲುವಾಗಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹೀಗಾಗಿ ಪರಿಷತ್ನ ಮೂರು ಸ್ಥಾನ ತೆರವಾಗಿದ್ದವು.
ಶೆಟ್ಟರ್ ಅವರ ಸದಸ್ಯತ್ವದ ಅವಧಿ 2028 ಜೂನ್ 14 ರ ವರೆಗೆ ಇರಲಿದೆ. ತಿಪ್ಪಣ್ಣಪ್ಪ ಕಮಕನೂರು ಅವರ ಅವಧಿ 2026 ಜೂನ್ 30 ರ ವರೆಗೆ ಇರಲಿದ್ದು, ಸಚಿವ ಬೋಸರಾಜು ಅವರ ಅವಧಿ ಒಂದು ವರ್ಷದಲ್ಲೇ (2024 ಜೂನ್ 17) ಮುಕ್ತಾಯವಾಗಲಿದೆ.