ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ತಂಬಾಕು ಸೇವನೆ ದುಷ್ಪರಿಣಾಮ ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ :ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಾಕೋಸ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆರೋಗ್ಯ ಇಲಾಖೆಯ ಕೌನ್ಸಿಲರ್ ಶ್ರೀಮತಿ ರಮ್ಯಾ ಬಿ ಯವರು ವಿದ್ಯಾರ್ಥಿಗಳಿಗೆ ಹದಿಹರೆಯದ ಪ್ರಾಯದಲ್ಲಿ ಹೇಗೆ ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂಬ ಮಾಹಿತಿಯನ್ನು ನೀಡಿದರು. ತಂಬಾಕು ಸೇವನೆ ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳಿಂದ ನಮ್ಮ ಆರೋಗ್ಯ ನಷ್ಟವಾಗುವುದರಿಂದ ದೇಶದ ಆರೋಗ್ಯವಂತ ಜನ ಸಂಪನ್ಮೂಲಕ್ಕೆ ನಷ್ಟ ಎಂದು ಹೇಳಿದರು. ತಮ್ಮ ಬಿಡುವಿನ ಸಮಯವನ್ನು ಸಂಗೀತ ಸಾಹಿತ್ಯ, ಸಾಂಸ್ಕೃತಿಕ ಇನ್ನಿತರ ಉತ್ತಮ ಚಟುವಟಿಕೆಗಳ ಮೂಲಕ ಕಳೆಯುವುದರೊಂದಿಗೆ ಆರೋಗ್ಯವಂತ ಸುಸಂಸ್ಕೃತ ಸಮಾಜವನ್ನು ರೂಪುಗೊಳಿಸುವ ಜವಾಬ್ದಾರಿಯುತ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಏಲಿಯಾಸ್ ಎಮ್ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಹದಿಹರೆಯದ ಪ್ರಾಯದಲ್ಲಿ ಮನಸ್ಸು ಚಂಚಲಗೊಳ್ಳದ ಹಾಗೆ ತಮ್ಮ ಚಿತ್ತವನ್ನು ಶಿಕ್ಷಣದ ಕಡೆಗೆ ಕೇಂದ್ರೀಕರಿಸಿ ಬದುಕಿನಲ್ಲಿ ಉತ್ತಮವಾದ ಸ್ಥಾನಮಾನವನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ ಕೆ ಸ್ವಾಗತಿಸಿ ಪ್ರಸ್ತಾವಿಕ ನುಡಿದರು. ಬೆಳ್ತಂಗಡಿ ಆರೋಗ್ಯ ಇಲಾಖೆ ಲೆಕ್ಕ ಸಹಾಯಕಿ ಶ್ರೀಮತಿ ಸೌಮ್ಯ.ರೈ. ಪಿ.ಆರ್, ಎನ್ಎಸ್ಎಸ್ ಘಟಕ ನಾಯಕ ಮೋಹನ್ ಕುಮಾರ್ ಕೆ., ಘಟಕ ನಾಯಕಿ ಕಾವ್ಯ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು, ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಲಯ ಮತ್ತು ಬಳಗದವರು ಎನ್ಎಸ್ಎಸ್ ಧ್ಯೇಯ ಗೀತೆಯನ್ನು ಹಾಡಿದರು. ಕಾಲೇಜಿನ ಕಾರ್ಯಕ್ರಮ ಸಂಯೋಜಕರಾದ ಮಧು ಏ.ಜೆ. ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!