ಅರಂತೋಡು: ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಮುಖಂಡ ಎಸ್.ಸಂಶುದ್ದೀನ್ ಅವರ ಅರಂಬೂರು ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು ಶುಕ್ರವಾರ ಆರೋಪಿಗಳನ್ನು ಸುಳ್ಯ ಪೊಲೀಸರು ಕರೆತಂದು ಮಹಜರು ನಡೆಸಿದ್ದಾರೆ.
ಇಬ್ಬರು ಆರೋಪಿಗಳಲ್ಲಿ ಫಯಾಜ್‌ನನ್ನು ಸಕಲೇಶಪುರ ಹಾಗೂ ಪ್ರಸನ್ನ ನನ್ನು ಬೆಂಗಳೂರಿನ ಗೋವಿಂದ ನಗರದಿಂದ ಬಂಧಿಸಲಾಗಿದೆ. ಅವರನ್ನು ಸುಳ್ಯಕ್ಕೆ ಕರೆತಂದು ದರೋಡೆಗೆ ಒಳಗಾಗಿದ್ದ ಮನೆ ಮತ್ತು ಪರಿಸರದ ಮಹಜರು ನಡೆಸಿದ್ದು ಬಳಿಕ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಮೇಲೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಕಡೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳ್ಳರಿಗೆ ಆ ದಿನ ಸಂಶುದ್ದೀನ್ ಅವರ ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶ ಇರಲಿಲ್ಲವೆಂದು ವಿಚಾರಣೆ ವೇಳೆ ಗೊತ್ತಾಗಿದೆ. ಕಾಸರಗೋಡಿ ನಲ್ಲಿರುವ ಸಹಚರನನ್ನು ಭೇಟಿಯಾಗಲು ಘಟನೆ ನಡೆದ ದಿನ ಆರೋಪಿಗಳು ಕಾರಿನಲ್ಲಿ ಸುಳ್ಯ ಮೂಲಕ ಹೋಗುತ್ತಿದ್ದಾಗ ಅರಂಬೂರಿನಲ್ಲಿರುವ ಸಂಶುದ್ದೀನ್ ಅವರ ಮನೆಯ ಮುಂಭಾಗದ ಗೇಟಿನಲ್ಲಿ ನ್ಯೂಸ್ ಪೇಪರ್ ಇಟ್ಟಿದ್ದನ್ನು ಗಮನಿಸಿದ ಕಳ್ಳರು ಮನೆಯಲ್ಲಿ ಯಾರು ಇರಲಾರರು ಎಂದು ದೃಢಪಡಿಸಿಕೊಂಡು ಮುಂದುವರಿದಿದ್ದರು.
ಕಾಸರಗೋಡಿನಲ್ಲಿ ಸಹಚರನ ಜತೆ ಮಾತುಕತೆ ನಡೆಸಿದಾಗ ವಕೀಲರಿಗೆ ಫೀಸ್ ಕೊಡಲು ಹಣದ ಸಮಸ್ಯೆಯನ್ನು ಹೇಳಿಕೊಂಡಿದ್ದ ಎನ್ನಲಾಗಿದೆ. ಅದಕ್ಕೆ ಆರೋಪಿಗಳು ಹಣ ಒದಗಿಸಿಕೊಡುವ ಭರವಸೆ ನೀಡಿ ಮರಳಿ ಬಂದು ಸಂಶುದ್ದೀನ್ ರವರ ಮನೆಯಲ್ಲಿ ದರೋಡೆ ನಡೆಸಿದ್ದರು.