ಕಡಬ: ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ದಿನಾಚರಣೆ ಕಡಬ ತಾಲೂಕು ಕಛೇರಿಯ ತಹಸೀಲ್ದಾರ್ ಕಚೇರಿಯಲ್ಲಿಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ನಾಡಪ್ರಭು ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಡಬ ತಹಸೀಲ್ದಾರ್ ಟಿ.ರಮೇಶ್ ಬಾಬು, ಬೆಂಗಳೂರನ್ನು ಜಗತ್ತು ನೋಡುವಂತೆ ಅಭಿವೃದ್ಧಿ ಪಡಿಸಿದ ಒಬ್ಬ ದೂರದೃಷ್ಠಿಯ ನಾಯಕ ಕೆಂಪೇಗೌಡ, ಕೃಷಿಯಿಂದಲೇ ಆರ್ಥಿಕ ಸಬಲೀಕರಣ ಎಂದು ಮನಗಂಡು ಬೆಂಗಳೂರು ಆಸು ಪಾಸಿನಲ್ಲಿ ಹತ್ತಾರು ಕೆರೆಗಳನ್ನುನಿರ್ಮಾಣ ಮಾಡಿ ಕೃಷಿಗೆ ಉತ್ತೇಜನ ನೀಡಿದ್ದಾರೆ. ಇಂತಹ ಮಹಾನ್ ನಾಯಕರ ಜನ್ಮದಿನವನ್ನು ಮುಂದಿನ ದಿಗಳಲ್ಲಿ ಅದ್ಧೂರಿಯಾಗಿ ಇಲ್ಲಿ ಒಕ್ಕಲಿಗ ಗೌಡ ಸಂಘದೊಂದಿಗೆ ಸಾರ್ವಜನಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಒಕ್ಕಲಿಗ ಕಡಬ ಸಂಘದ ಅಧ್ಯಕ್ಷ ಸುರೇಶ್ ಬೈಲು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಮೀರಸಾಹೇಬ್, ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪನೆಮಜಲು ಕೆಂಪೇಗೌಡರ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಪಟ್ಟದ ಪಂಚಾಯತ್ ಮುಖ್ಯಾಧಿಕಾರಿ ಪಕಿರ ಮೂಲ್ಯ, ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಒಕ್ಕಲಿಗ ಗೌಡ ಸಂಘದ ಪ್ರಮುಖರಾದ ತಮ್ಮಯ್ಯ ಗೌಡ ಸುಳ್ಯ, ಮಂಜುನಾಥ ಗೌಡ ಕೋಲಂತಡಿ, ಗಣೇಶ್ ಗೌಡ ಕೈಕುರೆ, ಪ್ರಶಾಂತ್ ಪಂಜೋಡಿ ಮತ್ತಿತರರು ಉಪಸ್ಥಿತರಿದ್ದರು. ಸಿಬ್ಬಂದಿ ಉದಯ ಕುಮಾರ್ ಪ್ರಾರ್ಥಿಸಿದರು. ಉಪತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪತಹಶೀಲ್ದಾರ್ ಮನೋಹರ್ ವಂದಿಸಿದರು.