ಸಂಸ್ಕಾರಗಳು ಮಗುವಿನಲ್ಲಿ ಸಚ್ಚಾರಿತ್ರ‍್ಯವನ್ನು ಬೆಳೆಸುವಲ್ಲಿ ನೆರವಾಗುತ್ತದೆ-ಡಾ.ಪ್ರಭಾಕರ ಭಟ್ ಕಲ್ಲಡ್ಕ

ಶೇರ್ ಮಾಡಿ

ಪಟ್ಟೂರು: ಪ್ರಾಚೀನ ಭಾರತದಲ್ಲಿ ಹಿರಿಯರು ಮಾಡಿರುವ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಾರ್ಯ ನಮ್ಮ ಶಾಲೆಗಳಲ್ಲಿ ಆಗುತ್ತದೆ. ಸಂಸ್ಕಾರ, ಹಿರಿಯರಿಗೆ ನೀಡಬೇಕಾದ ಗೌರವ, ಉನ್ನತ ಸ್ಥಾನ ಇವೆಲ್ಲವೂ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಲ್ಲಿ ಮೂಡಿಸುವುದರಿಂದ ವಿಭಜನೆಯಲ್ಲಿರುವಂತಹ ಹಲವಾರು ಮನೆಗಳು ಇಂದು ಒಟ್ಟುಗೂಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ನಮ್ಮ ಶಾಲೆಯಲ್ಲಿ ಕೊಡುವ ಶಿಕ್ಷಣವನ್ನು ಮನೆಯಲ್ಲಿ ಪಾಲಿಸುವಂತೆ ಪೋಷಕರು ಗಮನ ಹರಿಸಬೇಕು. ಈ ಸಂಸ್ಕಾರಗಳು ಮಗುವಿನಲ್ಲಿ ಸಚ್ಚಾರಿತ್ರ‍್ಯವನ್ನು ಬೆಳೆಸುವಲ್ಲಿ ನೆರವಾಗುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ನುಡಿದರು.

ಜು.1ರಂದು ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭವಾದ ಎಲ್ ಕೆ ಜಿ, ಯುಕೆಜಿ ಆಂಗ್ಲ ಮಾಧ್ಯಮ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿದ್ಯಾಸಂಸ್ಥೆಗೆ ನೂತನವಾಗಿ ದಾಖಲೆಗೊಂಡಿರುವಂತಹ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮನ್ನು ಪರಂಪರೆಯಂತೆ ಹೋಮ ಕುಂಡಕ್ಕೆ ಅಗ್ನಿ ಸ್ಪರ್ಶದೊಂದಿಗೆ ಘೃತಾಹುತಿ ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಶಿಕ್ಷಣ ಕೊಡುವುದು ಆಂಗ್ಲ ಮಾಧ್ಯಮದಲ್ಲಿ ಆದರೂ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರ ಹಾಗೂ ಭಾರತೀಯತೆಯನ್ನು ಬೆಳೆಸುವ ವಿಷಯದಲ್ಲಿ ರಾಜಿ ಇಲ್ಲ. ಆಂಗ್ಲ ಮಾಧ್ಯಮವಾದರೂ ಇಂಗ್ಲೀಷ್ ನ್ನು ಒಂದು ಭಾಷೆಯಾಗಿ ಕಲಿಸುತ್ತೇವೆ ಸಂಸ್ಕೃತಿಯಾಗಿ ಅಲ್ಲ. ಇದನ್ನು ಪೋಷಕರು ಗಮನಿಸಬೇಕಾಗಿ ತಿಳಿಸಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶ್ರೀರಾಮ ಶಾಲೆ ಪಟ್ಟೂರು ನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ದಾಖಲಿಸಿದ್ದೀರಿ, ಈ ಮೂಲಕ ನಮ್ಮ ಶಾಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸಿದ್ದೀರಿ ಈ ಕುರಿತು ಎಲ್ಲ ಪೋಷಕರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಜಿರೆಯ ಆದರ್ಶ ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಪ್ರಭು, ಕಾರ್ಯದರ್ಶಿ ಜಯಂತ ಶೆಟ್ಟಿ, ನಿಡ್ಲೆಯ ಕೃಷಿಕ ಲಕ್ಷ್ಮೀನಾರಾಯಣ ರಾವ್ ಕೇವಳ, ಸೌತಡ್ಕದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮಲ್ಲಿ ಶಾಲಾ ಆಡಳಿತ ಸಮಿತಿ ಸಂಚಾಲಕ ಪ್ರಶಾಂತ ಶೆಟ್ಟಿ ದೇರಾಜೆ ಸ್ವಾಗತಿಸಿದರು, ಸಮಿತಿ ಸದಸ್ಯ ಕಿರಣ್ ಕೆ ವಂದಿಸಿದರು. ವಿದ್ಯಾರ್ಥಿ ನಾಯಕಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

ಎಲ್ ಕೆ ಜಿ, ಯುಕೆಜಿಗೆ ನೂತನವಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಭಾರತದ ಆದರ್ಶ ಪುರುಷರು ಹಾಗೂ ಮಾತೆಯರಾದ ರಾಮ, ಸೀತೆ ಲಕ್ಷ್ಮಣ, ಭರತ, ಹನುಮಂತ, ಕೃಷ್ಣ,ರಾಧೆ ಮುಂತಾದವರ ವೇಷ ತೊಟ್ಟ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಪುಟಾಣಿಗಳಿಗೆ ಪುಪ್ಷಾರ್ಚನೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ ಮಾಡಲಾಯಿತು. ವಿದ್ಯಾರ್ಥಿಳೆಲ್ಲರೂ ಘೃತಾಹುತಿ ನೀಡಿ, ಉದ್ಘಾಟಕರಿಂದ ತಿಲಕ ಧರಿಸಿ ಆಶೀರ್ವಾದ ಪಡೆದರು.

Leave a Reply

error: Content is protected !!