ಕರ್ನಾಟಕ ಬಜೆಟ್‌: ವಿದ್ಯಾಸಿರಿ ಸೇರಿದಂತೆ ವಿದ್ಯಾರ್ಥಿ ವೇತನ ಯೋಜನೆಗಳ ಮರು ಜಾರಿ; ಹಿಂದುಳಿದ ವರ್ಗಗಳಿಗೆ ಭರಪೂರ ನೆರವು

ಶೇರ್ ಮಾಡಿ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರವು ಅನುದಾನ ನೀಡದೇ ಸ್ಥಗಿತಗೊಂಡಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿವಿಧ ಯೋಜನೆಗಳನ್ನು ಮರು ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಈ ಬಾರಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದಾರೆ.

ಹಿಂದುಳಿದ ವರ್ಗಗಳ ಬಗೆಗಿನ ನಮ್ಮ ಸರ್ಕಾರಕ್ಕೆ ಇರುವ ಕಾಳಜಿ ಮತ್ತು ಬದ್ಧತೆಗೆ ಇಲ್ಲಿಯವರೆಗೆ ಮಂಡಿಸಿರುವ ಬಜೆಟ್‌ಗಳೇ ಸಾಕ್ಷಿ. ಸಾಮಾಜಿಕ ನ್ಯಾಯ ಎನ್ನುವುದು ರಾಜಕೀಯ ಅಸ್ತ್ರ ಅಲ್ಲ. ದಮನಿತರಿಗೆ ಅವಕಾಶ. ಪ್ರಾತಿನಿಧ್ಯಗಳನ್ನು ನೀಡುವ ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಅವಶ್ಯಕ ಅನುದಾನ ನೀಡದೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷಿಸಿರುವುದು ವಿಷಾದನೀಯ ಬೆಳವಣಿಗೆ ಎಂದು ಸಿದ್ದರಾಮಯ್ಯ ಬಜೆಟ್‌ ಭಾಷಣದಲ್ಲಿಯೇ ಕಿಡಿಕಾರಿದರು.

ಹಿಂದುಳಿದ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಕೊಡುಗೆ ಏನು?
ಅರಿವು ಯೋಜನೆ ಪುನಾರಾರಂಭ
ವೈದ್ಯಕೀಯ, ಇಂಜಿನಿಯರಿಂಗ್‌ ಮತ್ತು ಇತರೆ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಅರಿವು ಎಂಬ ಯೋಜನೆಯ ಮುಖಾಂತರ ವಾರ್ಷಿಕ ಒಂದು ಲಕ್ಷ ರೂ.ಗಳ ಸಾಲವನ್ನು ಶೇ.2ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುತ್ತಿತ್ತು. ಇದರಿಂದ 11,956 ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ, ಈ ಕಾರ್ಯಕ್ರಮವನ್ನು ಹಿಂದಿನ ಸರ್ಕಾರವು 2020-21ನೇ ಸಾಲಿನಿಂದ ಸ್ಥಗಿತಗೊಳಿಸಿದ್ದು, ನಮ್ಮ ಸರ್ಕಾರವು ಪುನರ್‌ ಚಾಲನೆ ನೀಡಲಿದೆ.

ವಿದ್ಯಾಸಿರಿ ಮತ್ತೆ ಆರಂಭ
ವಿದ್ಯಾಸಿರಿ ಯೋಜನೆಯಡಿ ಸರ್ಕಾರದ ವಸತಿ ನಿಲಯಗಳಲ್ಲಿ ಪ್ರವೇಶ ದೊರಕದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವಾರ್ಷಿಕ 15,000 ರೂ. ನೀಡಲಾಗುತ್ತಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 3.6 ಲಕ್ಷ ವಿದ್ಯಾರ್ಥಿಗಳಿಗೆ
432 ಕೋಟಿ ರೂ.ಗಳ ನೆರವು ನೀಡಲಾಗಿತ್ತು. ಈ ಯೋಜನೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಅಂದರೆ, 2020-21, 2021-22 ಮತ್ತು 2022-23ರಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದಿಲ್ಲ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅನುಕೂಲವಾಗುವುದರಿಂದ ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸಲಾಗುವುದು.

ವಿದ್ಯಾರ್ಥಿ ವೇತನ ಮರುಜಾರಿ
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು 24 ಲಕ್ಷ ವಿದ್ಯಾರ್ಥಿಗಳಿಗೆ 881 ಕೋಟಿ ರೂ.ಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು 2020-21, 2021-22 ಮತ್ತು 2022-23ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸದೇ ನಿರ್ಲಕ್ಷಿಸಿದ್ದು, ಈ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಪುನರ್‌ ಪ್ರಾರಂಭಿಸಲಿದೆ.

ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಅನುದಾನ
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 17 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು ಈ ಕಾರ್ಯಕ್ರಮವನ್ನು 202೦-21, 2021-22 ಮತ್ತು 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುವುದಿಲ್ಲ. ಈ ಕಾರ್ಯಕ್ರಮವನ್ನು ಕೂಡ ನಮ್ಮ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ ಮುಂದುವರೆಸಲಿದೆ.

ಶುಚಿ ಸಂಭ್ರಮ ಕಿಟ್‌ ವಿತರಣೆ ಮತ್ತೆ ಚಾಲನೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿದ್ದ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ನಿಲಯಾರ್ಥಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ʻಶುಚಿ ಸಂಭ್ರಮ ಕಿಟ್‌ʼ ನೀಡಲಾಗುತ್ತಿತು. ಮೈಸೋಪು, ಬಟ್ಟೆ ಸೋಪು, ಟೂತ್‌ ಪೇಸ್ಟ್, ಕೊಬ್ಬರಿ ಎಣ್ಣೆ ಒಳಗೊಂಡ ಈ ಕಿಟ್‌ ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿತ್ತು. ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಯಲ್ಲಿ ಶುಚಿತ್ವದ ಪಾಠವನ್ನು ಬಾಲ್ಯದಿಂದಲೇ ಕಲಿಯಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿತ್ತು. ಆದರೆ, ಹಿಂದಿನ ಸರ್ಕಾರವು 2020-21 ಮತ್ತು 2021-22 ಈ ಎರಡು ವರ್ಷಗಳಲ್ಲಿ ವಸತಿ ನಿಲಯಗಳಲ್ಲಿದ್ದ 3,31,712 ನಿಲಯಾರ್ಥಿಗಳಿಗೆ ʻಶುಚಿ ಸಂಭ್ರಮ ಕಿಟ್‌ʼ ಗಳನ್ನು ನೀಡಿರುವುದಿಲ್ಲ. ನಮ್ಮ ಸರ್ಕಾರವು ಎಲ್ಲಾ ನಿಲಯಾರ್ಥಿಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ʻಶುಚಿ ಸಂಭ್ರಮ ಕಿಟ್‌ʼ ಗಳನ್ನು ವಿತರಿಸಲಿದೆ.

ಹಿಂದುಳಿದ ವರ್ಗದ ಯುವಜನರ ಸ್ವಾವಲಂಬನೆಗೆ ನೆರವು
ʻಸ್ವಾವಲಂಬಿ ಸಾರಥಿʼ ಯೋಜನೆಯಡಿ, ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು, ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಕ್ಕೆ ನಿರ್ಧಾರ.

ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ಶೇ.20 ರಷ್ಟು ಅಥವಾ ಗರಿಷ್ಠ ಒಂದು ಲಕ್ಷ ರೂ. ಗಳ ಸಾಲ ಸಹಾಯಧನವನ್ನು ವಾಣಿಜ್ಯ ಬ್ಯಾಂಕುಗಳ ಮುಖಾಂತರ ನೀಡಲು ನಿರ್ಧರಿಸಲಾಗಿದೆ.

ರಾಜ್ಯದ ಸೇವಾ ವಲಯದಲ್ಲಿ ಇರುವ ವಿಫುಲ ಅವಕಾಶಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ-2(ಎ) ಜಾತಿಗಳಿಗೆ ಸೇರಿದ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಪಡೆಯುವ 10 ಕೋಟಿ ರೂ.‌ ಗಳವರೆಗಿನ ಸಾಲಕ್ಕೆ ಶೇ.6 ರಷ್ಟು ಬಡ್ಡಿ ಸಹಾಯಧನ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು 2000ನೇ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಪರಿಶೀಲಿಸಿ, ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ-2ಎ ನಲ್ಲಿ ಬರುವ ಜಾತಿಗಳಿಗೆ ಒಂದು ಕೋಟಿ ರೂ.ವರೆಗಿನ ನಿರ್ಮಾಣ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ.

ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಹಿಂದುಳಿದವರಾಗಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಮುಖಾಂತರ ಕೈಗೊಳ್ಳಲು ಎರಡು ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿದೆ.

Leave a Reply

error: Content is protected !!