ಚಾರ್ಮಾಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎರಡು ಸರಕಾರಿ ಬಸ್ಸುಗಳು ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಎರಡೂ ಬಸ್ಸಿನ ಚಾಲಕರ ಕಾಲಿಗೆ ಗಂಭೀರ ಗಾಯವಾದ ಘಟನೆ ಶುಕ್ರವಾರ ಸಂಭವಿಸಿದೆ.
ಘಟನೆಯಲ್ಲಿ ಎರಡು ಬಸ್ಸುಗಳ ಮುಂಭಾಗ ನುಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಬಸ್ಸಿನ ಚಾಲಕರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡೂ ಬಸ್ಸಿನಲ್ಲಿ ಸುಮಾರು 80 ಮಂದಿ ಪ್ರಯಾಣಿಕರಿದ್ದರೆನ್ನಲಾಗಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ರಸ್ತೆ ಅಪಘಾತದಿಂದ ಚಾರ್ಮಾಡಿ ಘಾಟಿಯಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ, ಇದರ ನಡುವೆ ಕೆಲ ಪ್ರಯಾಣಿಕರು ಸುಮಾರು 10 ಕಿ.ಮೀ. ನಡೆದುಕೊಂಡು ಕೊಟ್ಟಿಗೆಹಾರ ತಲುಪಿದ್ದಾರೆ ಎನ್ನಲಾಗಿದೆ.
ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ದಟ್ಟ ಮಂಜು ಅವರಿಸುತ್ತಿದ್ದು ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿದ್ದು, ಮತ್ತೊಂದೆಡೆ ಕಳೆದ ಭಾರಿ ಅಂದರೆ 2019ರಲ್ಲಿ ರಸ್ತೆ ಕುಸಿತಗೊಂಡ ಜಾಗದ ಕಾಮಗಾರಿ ಇನ್ನೂ ಪೂರ್ಣಗೊಳಿಸದೆ ಇರುವುದು ಅಪಘಾತಕ್ಕೆ ಕಾರಣವೆನ್ನಲಾಗಿದೆ.