ಮಸಾಲೆ ದೋಸೆಯೊಂದಿಗೆ ಸಾಂಬಾರ್‌ ನೀಡದ್ದಕ್ಕೆ ರೆಸ್ಟೋರೆಂಟ್‌ ಮಾಲೀಕನಿಗೆ 3,500 ರೂ ದಂಡ

ಶೇರ್ ಮಾಡಿ

ಮಸಾಲೆ ದೋಸೆ ಜತೆ ಸಾಂಬಾರ್‌ ನೀಡದ ಕಾರಣಕ್ಕೆ ರೆಸ್ಟೋರೆಂಟ್ ವೊಂದಕ್ಕೆ ಗ್ರಾಹಕ ನ್ಯಾಯಾಲಯ 3,500 ರೂ.ಯ ದಂಡವನ್ನು ವಿಧಿಸಿರುವ ಘಟನೆ ಬಿಹಾರದ ಬಕ್ಸರ್ ನಲ್ಲಿ ನಡೆದಿದೆ.
ಎಲ್ಲಾ ಹೊಟೇಲ್‌ ನಲ್ಲಿ ಸಾಮಾನ್ಯವಾಗಿ ದೋಸೆಯೊಟ್ಟಿಗೆ ಸಾಂಬಾರ್‌ ಹಾಗೂ ಚಟ್ನಿ ಕೊಡುತ್ತಾರೆ. ಆದರೆ ಇಲ್ಲೊಂದು ಹೊಟೇಲ್‌ ಮಸಾಲೆ ದೋಸೆಯೊಂದಿಗೆ ಸಾಂಬಾರ್‌ ನೀಡದ್ದಕ್ಕೆ ದಂಡವನ್ನು ಕಟ್ಟುವ ಪಜೀತಿಗೆ ಸಿಲುಕಿದೆ
.

ಘಟನೆ ವಿವರ:
2022 ರ ಆಗಸ್ಟ್‌ 15 ರಂದು ವಕೀಲ ಮನೀಶ್ ಗುಪ್ತಾ ಎನ್ನುವವರು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಬಿಹಾರದ ಬಕ್ಸರ್ ನಲ್ಲಿರುವ ನಮಕ್ ರೆಸ್ಟೋರೆಂಟ್ ಗೆ ತೆರಳಿದ್ದಾರೆ. ಈ ವೇಳೆ 140 ರೂಪಾಯಿಯ ಸ್ಪೆಷಲ್‌ ಮಸಲಾ ದೋಸವನ್ನು ಆರ್ಡರ್‌ ಮಾಡಿದ್ದಾರೆ. ಸಾಮಾನ್ಯವಾಗಿ ಹೊಟೇಲ್‌ ನಲ್ಲಿ ಮಸಲಾ ದೋಸೆ ಜತೆ ಸಾಂಬರ್‌ ನೀಡುತ್ತಾರೆ. ಆದರೆ ತಾವು ಆರ್ಡರ್‌ ಮಾಡಿದ ಮಸಾಲೆ ದೋಸೆಯೊಟ್ಟಿಗೆ ಸಾಂಬಾರ್‌ ಇಲ್ಲದಿರುವುದನ್ನು ಮನೀಶ್‌ ಗಮನಿಸಿದ್ದಾರೆ.
ಇದರ ಬಗ್ಗೆ ಪ್ರಶ್ನೆ ಮಾಡಲು ಮಾಲಕರ ಬಳಿ ತೆರಳಿದ್ದಾರೆ. ಈ ವೇಳೆ ರೆಸ್ಟೋರೆಂಟ್‌ ಮಾಲಕ ಸರಿಯಾಗಿ ಪ್ರತಿಕ್ರಿಯೆ ನೀಡದೆ. ನೀವು 140 ರೂ.ಗೆ ಇಡೀ ರೆಸ್ಟೋರೆಂಟ್ ಖರೀದಿಸಲು ಬಯಸಿದ್ದೀರಾ? ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ.
ಇದಾದ ಬಳಿಕ ಮನೀಶ್ ರೆಸ್ಟೋರೆಂಟ್ ಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ.
11 ತಿಂಗಳ ಬಳಿಕ ಗ್ರಾಹಕ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಮತ್ತು ಸದಸ್ಯ ವರುಣ್ ಕುಮಾರ್ ಅವರ ವಿಭಾಗೀಯ ಪೀಠವು ರೆಸ್ಟೋರೆಂಟ್ ನ್ನು ತಪ್ಪಿತಸ್ಥ ಎಂದು ಪರಿಗಣಿಸಿ, ರೂ 3,500 ದಂಡವನ್ನು ವಿಧಿಸಿದೆ.
ಸರಿಯಾದ ರೀತಿಯಲ್ಲಿ ರೆಸ್ಟೋರೆಂಟ್‌ ಅವರು ಪ್ರತಿಕ್ರಿಯೆ ನೀಡದೆ ಇರುವುದರಿಂದ ಅರ್ಜಿದಾರ ಮನೀಶ್ ಗುಪ್ತಾ ಅವರಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ನೋವು ಉಂಟಾಗಿದೆ. ರೂ 1,500 ವ್ಯಾಜ್ಯ ವೆಚ್ಚ ಮತ್ತು ರೂ 2,000 ಮೂಲ ದಂಡ ಎಂಬುದಾಗಿ ದಂಡವನ್ನು ಎರಡು ಭಾಗಗಳಲ್ಲಿ ವಿಧಿಸಲಾಗಿದೆ.
ದಂಡವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡದಿದ್ದರೆ, ದಂಡದ ಮೊತ್ತಕ್ಕೆ ರೆಸ್ಟೋರೆಂಟ್‌ನಿಂದ ಶೇಕಡಾ 8 ರಷ್ಟು ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Leave a Reply

error: Content is protected !!