ವಿಧಾನ ಮಂಡಲ ಕಲಾಪ ವೀಕ್ಷಿಸಿದ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿಗಳು

ಶೇರ್ ಮಾಡಿ

ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಜು.9 ಮತ್ತು ಜು.10 ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಉಪನ್ಯಾಸಕಿ ಶ್ರೀಮತಿ ಡೀನಾ ಪಿ.ಪಿ ಇವರ ಮಾರ್ಗದರ್ಶನದಲ್ಲಿ ವಿಧಾನ ಮಂಡಲ ಕಲಾಪವನ್ನು ವೀಕ್ಷಿಸಲಾಯಿತು. ಅವಕಾಶ ದೊರಕಿದ 40 ನಿಮಿಷಗಳ ಕಾಲದ ಕಲಾಪವು ಪ್ರಶ್ನೋತ್ತರ ಸಂಧರ್ಭದ ಭಾಗವಾಗಿದ್ದುದರಿಂದ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಪ್ರಾಯೋಗಿಕ ಜ್ಞಾನದ ಭಾಗವಾಗಿ ಅತ್ಯಮೂಲ್ಯವಾದ ಕಲಿಕಾ ಅನುಭವವಾಗಿತ್ತು.

ರಾಮನಗರದ ಜಾನಪದ ಲೋಕಕ್ಕೆ ಭೇಟಿ
ಪ್ರವಾಸದ ಮುಂದುವರಿದ ಭಾಗವಾಗಿ ರಾಮನಗರದ ಜಾನಪದ ಲೋಕಕ್ಕೆ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ನೂರಂದಪ್ಪ ರವರ ಮಾರ್ಗದರ್ಶನದಲ್ಲಿ ಭೇಟಿಯನ್ನು ನೀಡಲಾಯಿತು. 1993ರಲ್ಲಿ ಆಗಿನ ದಕ್ಷ ಆಡಳಿತಗಾರ ಮತ್ತು ಭಾರತದ ಪ್ರಸಿದ್ಧ ಜಾನಪದ ಸಂಶೋಧಕರಾದ ಡಾ.ಎಚ್.ಎಲ್ ನಾಗೇಗೌಡ ಅವರು ಕರ್ನಾಟಕ ನಾಡಿನಾದ್ಯಂತ ಸಂಶೋಧನೆ ನಡೆಸಿ ಸಂಗ್ರಹಿಸಿದ ಜಾನಪದ ವಸ್ತುಗಳ ಸಂಗ್ರಹಗಳನ್ನು ವೀಕ್ಷಿಸಲಾಯಿತು. ಒಟ್ಟು ಒಂಬತ್ತು ವಸ್ತು ಸಂಗ್ರಹಾಲಯಗಳು ಹೊಂದಿರುವ, ಕರ್ನಾಟಕದ ಎಲ್ಲಾ ಸಮುದಾಯಗಳ ಜೀವನ ಸಂಸ್ಕೃತಿಯನ್ನು ಬಿಂಬಿಸುವ ಪ್ರಾಯೋಗಿಕ ಮಾದರಿಗಳನ್ನು ನೋಡುವ ಮೂಲಕ ಜಾನಪದ ಸಂಸ್ಕೃತಿಯ ವೈವಿಧ್ಯತೆಯನ್ನು ತಿಳಿದುಕೊಳ್ಳಲಾಯಿತು. ನಂತರದಲ್ಲಿ ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಕೇಂದ್ರವಾಗಿರುವ ಸ್ಪೂರ್ತಿಧಾಮಕ್ಕೆ ಭೇಟಿ ನೀಡಲಾಯಿತು.

ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಭೇಟಿ
ಭಾರತದ ಐದು ಅತ್ಯಂತ ಶ್ರೇಷ್ಠ ಕ್ರೀಡಾ ಪ್ರಾಧಿಕಾರ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ ಕೆ. ಇವರ ಮಾರ್ಗದರ್ಶನದಲ್ಲಿ ಭೇಟಿ ನೀಡಲಾಯಿತು.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಉತ್ತೇಜಿಸುವ ನಿಟ್ಟಿನಲ್ಲಿ ಈ ಭೇಟಿಯು ತುಂಬಾ ಮಹತ್ವದ್ದಾಗಿತ್ತು. ಭಾರತ ತಂಡದ ಜೂನಿಯರ್ ಬಾಲಕಿಯರ ಹಾಕಿ ತಂಡದ ಅಭ್ಯಾಸ ಪಂದ್ಯವನ್ನು ಈ ಸಂದರ್ಭದಲ್ಲಿ ವೀಕ್ಷಿಸಲಾಯಿತು. ಕ್ರೀಡಾ ಪ್ರಾಧಿಕಾರದ ಮುಖ್ಯ ಕೋಚ್ ಆಗಿರುವಂತಹ ಕುರಿಯನ್ ಪಿ.ಕೆ ಹಾಗೂ ಮ್ಯಾಕ್ಸಿ ರವರು ವಿದ್ಯಾರ್ಥಿಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಮಹತ್ವ, ಕಾರ್ಯವೈಖರಿಯ ವಿವರಣೆ ಜೊತೆಗೆ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸತತ 12 ವರ್ಷಗಳ ಕಾಲ ಚಿನ್ನದ ಪದಕ ಪಡೆದ ಭಾರತದ ಶ್ರೇಷ್ಠ ಕ್ರೀಡಾಪಟು ವಿ.ಸುರೇಖಾ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳು ಚರ್ಚಿಸಿದರು.
ನಂತರ ಕ್ರೀಡಾ ಪ್ರಾಧಿಕಾರದಲ್ಲಿರುವ ಆಧುನಿಕ ಸ್ಪರ್ಶವನ್ನು ಪಡೆದಿರುವ ಒಳಾಂಗಣ ಮತ್ತು ಹೊರಾಂಗಣ ಮೈದಾನಗಳು ಮತ್ತು ಅಥ್ಲೆಟಿಕ್ ಟ್ರ್ಯಾಕ್ ಗಳನ್ನು ವೀಕ್ಷಿಸಲಾಯಿತು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ವೆರೊಣಿಕ ಪ್ರಭಾ ರವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿರುವ ಭಾರತೀಯ ರೈಲ್ವೆ ವಸ್ತು ಸಂಗ್ರಹಾಲಯ ಮತ್ತು ಮಲ್ಟಿ ರಿಟೇಲ್ ಮಾರ್ಕೆಟಿಂಗ್ ಭಾಗವಾಗಿ ಬೆಂಗಳೂರಿನ ಬೃಹತ್ ಮಾರುಕಟ್ಟೆಗಳಿಗೆ ಭೇಟಿ ನೀಡಲಾಯಿತು.

ಈ ಪ್ರವಾಸದಲ್ಲಿ ಒಟ್ಟು 34 ವಿದ್ಯಾರ್ಥಿಗಳು ಹಾಗೂ ನಾಲ್ವರು ಉಪನ್ಯಾಸಕರಿದ್ದು ಈ ಶೈಕ್ಷಣಿಕ ಪ್ರವಾಸಕ್ಕೆ ಕಾಲೇಜಿನ ಸಂಯೋಜಕರಾದಂತಹ ಡಾ.ಸುರೇಶ್ ಹಾಗೂ ಸಹ ಸಂಯೋಜಕರಾದ ಡಾ.ಸೀತಾರಾಮ್ ಮತ್ತು ಉಪನ್ಯಾಸ ವೃಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿರುತ್ತಾರೆ.

ವಿಧಾನಮಂಡಲ ಕಲಾಪ ವೀಕ್ಷಿಸಲು ಅವಕಾಶ ಮಾಡಿಕೊಡುವಲ್ಲಿ ಸಹಕಾರ ನೀಡಿದ ನೆಲ್ಯಾಡಿಯ ನ್ಯಾಯವಾದಿಗಳಾದ ಇಸ್ಮಾಯಿಲ್ ರವರು, ಕಾಲೇಜಿನ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ರವರು, ಸ್ವಾಮಿ ವಿವೇಕಾನಂದ ಕಾಲೇಜು ಎಡಪದವು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೇಮ್ ನಾಥ ಶೆಟ್ಟಿ ಹಾಗೂ ಕಾಲೇಜಿನ ಪಿಟಿಎ ಅಧ್ಯಕ್ಷರಾದ ಅಬ್ದುಲ್ ಖಾದರ್ ಅವರು ಈ ಶೈಕ್ಷಣಿಕ ಪ್ರವಾಸಕ್ಕೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಾಯೋಗಿಕ ಜ್ಞಾನವನ್ನು ನೀಡುವಲ್ಲಿ ಇದೊಂದು ಅರ್ಥಪೂರ್ಣವಾದ ಶೈಕ್ಷಣಿಕ ಪ್ರವಾಸವಾಗಿತ್ತು.

Leave a Reply

error: Content is protected !!