ಸಿದ್ದರಾಮಯ್ಯ ಹೆಸರಿನಲ್ಲಿ ಧರ್ಮಸ್ಥಳದಲ್ಲಿ ಸೇವೆ, ಕಾಣಿಕೆ ಸಲ್ಲಿಸುತ್ತಿರುವ ಮಹಿಳೆಯರು! ಸಿಎಂಗೆ ಪತ್ರ ಬರೆದ ವೀರೇಂದ್ರ ಹೆಗ್ಗಡೆ

ಶೇರ್ ಮಾಡಿ

ಬೆಂಗಳೂರು: ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಮಹಿಳೆಯರು ಸೇವೆಗಳನ್ನು ಮಾಡಿಸುತ್ತಿದ್ದು, ಜತೆ ಭರ್ಜರಿ ಕಾಣಿಕೆಯನ್ನು ಹಾಕುತ್ತಿದ್ದಾರೆ.
ಈ ಬಗ್ಗೆ ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಧರ್ಮಸ್ಥಳದಲ್ಲಿ ವಿಶೇಷವಾಗಿ ಮಹಿಳೆಯರು ನಿಮ್ಮ ಹೆಸರಿನಲ್ಲಿ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ದರ್ಶನ ಪಡೆದುಕೊಂಡು ಹೋಗಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯ ಫಲವಾಗಿ ಉಚಿತ ಬಸ್‌ ಪ್ರಯಾಣ ಮಾಡುತ್ತಿರುವ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ನಾಡಿನ ಪ್ರಮುಖ ಭಕ್ತಿ ಕೇಂದ್ರವಾದ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಹಲವು ದೇವರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿಯೇ ಕಾಣಿಕೆಯನ್ನು ಹಾಕುತ್ತಿದ್ದಾರೆ.

ಏನಿದೆ ವೀರೇಂದ್ರ ಹೆಗ್ಗಡೆ ಅವರ ಪತ್ರದಲ್ಲಿ?
“ರಾಜ್ಯದಲ್ಲಿ 14ನೇ ಬಜೆಟ್‌ ಮಂಡಿಸಿದ ನಿಮಗೆ ಅಭಿನಂದನೆಗಳು. ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಧರ್ಮಸ್ಥಳಕ್ಕೆ ಬರುವ ಭಕ್ತರು ಅದರಲ್ಲೂ ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಮಹಿಳೆಯರು ನಿಮ್ಮ ಹೆಸರಿನಲ್ಲಿ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ”.

”ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ. ಎಲ್ಲರ ಪರವಾಗಿ ಅಭಿನಂದನೆಗಳು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವಕಾಶವಿದ್ದಾಗ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಬೇಕಾಗಿ ಅಪೇಕ್ಷೆ” ಎಂದು ವೀರೇಂದ್ರ ಹೆಗ್ಗಡೆಯವರು ಪತ್ರದಲ್ಲಿ ಬರೆದಿದ್ದಾರೆ.

ಶಕ್ತಿ ಯೋಜನೆಯ ಫಲವಾಗಿ ದೇಗುಲಗಳು ರಷ್‌
ಉಚಿತ ಬಸ್‌ ಯೋಜನೆ ಆರಂಭದ ಬಳಿಕ ಮಹಿಳೆಯರು ಪ್ರವಾಸ ಕೈಗೊಳ್ಳುವುದು ಹೆಚ್ಚಳವಾಗಿದೆ. ಬಹುತೇಕರು ಧಾರ್ಮಿಕ ಸ್ಥಳಗಳತ್ತ ಲಗ್ಗೆ ಇಟ್ಟಿದ್ದಾರೆ. ಪ್ರಮುಖವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮೈಸೂರು ಚಾಮುಂಡೇಶ್ವರಿ, ಹೊರನಾಡು, ಶೃಂಗೇರಿ, ಮುರುಡೇಶ್ವರ, ಕಳಸ, ಸಿಗಂಧೂರು, ನಂಜನಗೂಡು, ಮಂತ್ರಾಲಯ, ಸವದತ್ತಿ, ಗೊರವನಹಳ್ಳಿ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳು ಇಂದಿಗೂ ಹೆಚ್ಚಿನ ಜನದಟ್ಟಣೆ ಹೊಂದಿವೆ. ಮಾತ್ರವಲ್ಲದೇ ದೇವಾಲಯಗಳ ಕಾಣಿಕೆ, ದೇಣಿಗೆ ಆದಾಯವು ಕೂಡಾ ಶೇ.20 ರಿಂದ 30 ರಷ್ಟು ಹೆಚ್ಚಳವಾಗಿದೆ.

Leave a Reply

error: Content is protected !!