ಪುತ್ತೂರು: ಕಳೆದ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ವಿಚಾರದ ಕುರಿತು ರಾಷ್ಟ್ರೀಯ ನಾಯಕರ ಜತೆ ಚರ್ಚೆಗಳಾಗಿವೆ. ಚರ್ಚೆಯ ತೀರ್ಮಾನಗಳನ್ನು ರಾಷ್ಟ್ರೀಯ ನಾಯಕರೇ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಯಾವುದೇ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಬಯಸುವುದಿಲ್ಲ ಎಂದರು.
ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲ ಇರಲಿಲ್ಲ, ಎಲ್ಲ ನಾಯಕರು ಒಟ್ಟಾಗಿಯೇ ಕೆಲಸ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ ಕಾರಣದಿಂದ ಫಲಿತಾಂಶದಲ್ಲಿ ವ್ಯತ್ಯಾಸಗಳಾಗಿವೆ. ಅವರು ಬಿಜೆಪಿಯ ಹೆಸರಿನಲ್ಲಿ ಸ್ಪರ್ಧಿಸಲಿಲ್ಲ. ಪಕ್ಷದಲ್ಲಿ ಯಾರು ಇರಬೇಕು, ಯಾರು ಬರಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಿ ಪಕ್ಷದ ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸಲಾಗುವುದು ಎಂದರು.
ಗ್ರಾ.ಪಂ. ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ನಮ್ಮದು ಪ್ರಜಾಪ್ರಭುತ್ವದ ದೇಶ. ಇಲ್ಲಿ ಯಾರೂ ಬೇಕಾದರೂ ಸ್ಪರ್ಧೆ ಮಾಡಬಹುದು. ಬಿಜೆಪಿ ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಸ್ಪರ್ಧೆಯ ಬಗ್ಗೆ ನಾವು ಮಾತನಾಡುವುದಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ಪ್ರಸ್ತಾವ ಮುಂದಿಲ್ಲ. ಲೋಕಸಭಾ ಚುನಾವಣೆಯ ತಯಾರಿ ಮಾಡಿದ್ದೇವೆಯೇ ಹೊರತು ಬೇರೇನೂ ಪ್ರಕ್ರಿಯೆ ನಡೆದಿಲ್ಲ ಎಂದು ನಳಿನ್ ಸ್ಪಷ್ಟಪಡಿಸಿದರು.
ಜೈನ ಮುನಿ, ಉದ್ಯಮಿ, ಸಂಘಟನೆಯ ಕಾರ್ಯಕರ್ತ, ಕಾರ್ಮಿಕರ ಹೀಗೆ ಸಾಲು ಸಾಲು ಹತ್ಯೆ ನಡೆಯುತ್ತಿದೆ. ರಾಜ್ಯದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಈ ವಿಚಾರವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಎಲ್ಲ ಕೊಲೆ ಪ್ರಕರಣಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ನಳಿನ್ ಆಗ್ರಹಿಸಿದರು.
ಐತಿಹಾಸಿಕ ಸಾಧನೆ
ಚಂದ್ರಯಾನ-3 ಗಗನನೌಕೆ ಯಶಸ್ವಿ ಉಡಾವಣೆಯಾಗಿರುವುದು ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಸಾಧನೆಯಾಗಿದೆ. ವಿಜ್ಞಾನಿಗಳ ಅಗಾಧವಾದ ಪರಿಶ್ರಮದಿಂದ ಇಂದು ಸಮಸ್ತ ಭಾರತೀಯರು ಹೆಮ್ಮೆ ಪಡುವಂತಾಗಿದೆ ಎಂದು ನಳಿನ್ ತಿಳಿಸಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಗೋಪಾಲಕೃಷ್ಣ ಹೇರಳೆ, ಜೀವಂಧರ ಜೈನ್ ಉಪಸ್ಥಿತರಿದ್ದರು.