ಅಧಿಕ ಬಡ್ಡಿ ಆಸೆಗೆ ಹಣ ನೀಡಿ ಅಸಲನ್ನೇ ಕಳೆದುಕೊಳ್ಳುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಮಹಿಳೆಯರು ಕೈಸಾಲ ನೀಡಿ ಕೈಸುಟ್ಟುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇದರಿಂದ ಕಷ್ಟ ಪಡಬಾರದು ಎನ್ನುವ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿಯೇ ಕೇಂದ್ರ ಸರಕಾರ ಉಳಿತಾಯ ಯೋಜನೆಯೊಂದನ್ನು ಜಾರಿಗೆ ತಂದಿದೆ. ಕೇಂದ್ರದ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ಯೋಜನೆಗೆ ಕಲಬುರಗಿ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ದೊರಕುತ್ತಿದೆ. ಈ ಯೋಜನೆ ಲಾಭ ಪಡೆದುಕೊಳ್ಳಲು ಮಹಿಳೆಯರು ತಂಡೋಪತಂಡವಾಗಿ ಅಂಚೆ ಇಲಾಖೆಗೆ ಭೇಟಿ ನೀಡಿ ಈ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಹಣ ಉಳಿತಾಯ ಮಾಡುವ ಮಹಿಳೆಯರಿಗಾಗಿ ಅಂಚೆ ಇಲಾಖೆ ‘ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ’ಗೆ ಚಾಲನೆ ನೀಡಿದೆ. ಏಪ್ರಿಲ್‌ನಿಂದ ಆರಂಭವಾಗಿರುವ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಮೂರು ತಿಂಗಳ ಅವಧಿಯಲ್ಲಿ 1,898 ಮಹಿಳೆಯರು ಖಾತೆ ತೆರೆದಿದ್ದಾರೆ. ಖಾತೆ ತೆರೆಯಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ
ದಿನಕ್ಕೆ 15 ರಿಂದ 20 ಖಾತೆ
ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಹೆಣ್ಣುಮಕ್ಕಳಿಗಾಗಿ’ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ’ ಯನ್ನು ರೂಪಿಸಲಾಗಿದ್ದು, ಜಿಲ್ಲೆಯಲ್ಲಿ ನಿತ್ಯ 15 ರಿಂದ 20 ಖಾತೆಯನ್ನು ಮಹಿಳೆಯರು ತೆರೆಯುತ್ತಿದ್ದಾರೆ ಎಂದು ಅಂಚೆ ಇಲಾಖೆ ಮಾಹಿತಿ ನೀಡಿದೆ.
ಏನಿದು ಯೋಜನೆ?
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿರುವ ಈ ‘ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಗೆ ವಯಸ್ಸಿನ ನಿರ್ಬಂಧ ಇಲ್ಲದಿರುವುದು ವಿಶೇಷ. ಈ ಯೋಜನೆಯಡಿಯಲ್ಲಿ ಎರಡು ವರ್ಷದ ಅವಧಿಗೆ ಮಹಿಳೆಯರು ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ ರೂ. 1 ಸಾವಿರದಿಂದ 2 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟರೆ ಶೇ.7.5ರ ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಹಿಂದಿರುಗಿಸುವ ಯೋಜನೆ ಇದಾಗಿದೆ.
ಮೆಚುರಿಟಿ ಅವಧಿ
ಪ್ರತಿಯೊಂದು ಮಹಿಳಾ ಸಮ್ಮಾನ್ ಖಾತೆಯಿಂದ ಅದರ ಮೆಚ್ಯೂರಿಟಿ ಅವಧಿಯೊಳಗೆ (2 ವರ್ಷ) ಹಣ ತೆಗೆಯಲು ಸಾಧ್ಯವಿಲ್ಲ. ಆದರೆ, ಖಾತೆ ತೆರೆದ ಮಹಿಳೆ ಅಥವಾ ಬಾಲಕಿ ಸಾವನ್ನಪ್ಪಿದಾಗ, ಬಾಲಕಿಯರ ಪರವಾಗಿ ಖಾತೆಯನ್ನು ನಿರ್ವಹಿಸುತ್ತಿದ್ದ ವಾರಸುದಾರರು ಅಸುನೀಗಿದಾಗ, ಖಾತೆಯನ್ನು ಹೊಂದಿರುವ ಮಹಿಳೆ ಅಥವಾ ಬಾಲಕಿಗೆ ಗಂಭೀರವಾದ ಕಾಯಿಲೆಯಿದ್ದು ಅವರ ಚಿಕಿತ್ಸೆಗಾಗಿ ಖಾತೆಯಲ್ಲಿರುವ ಹಣದ ನೆರವು ಬೇಕು ಎಂದಾಗ ಸೂಕ್ತ ದಾಖಲೆಗಳನ್ನು ನೀಡಿ ಈ ಖಾತೆಯ ಹಣವನ್ನು ಪಡೆಯಬಹುದು.
ಮಹಿಳಾ ಸಮ್ಮಾನ್ ಯೋಜನೆಗೆ ಅಂಚೆ ಇಲಾಖೆ ಗರಿಷ್ಠ ಬಡ್ಡಿ ನೀಡುತ್ತಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸರಕಾರದ ಸಂಸ್ಥೆಗಳಲ್ಲಿ ಶೇ.7.5ರಷ್ಟು ಬಡ್ಡಿ ದರ ನೀಡುತ್ತಿರುವ ಉದಾಹರಣೆ ಇಲ್ಲ. ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚು ಬಡ್ಡಿದರ ಸಿಗಬಹುದು. ಆದರೆ, ಹಣಕ್ಕೆ ಮೋಸ ಆಗದಂತೆ ಭದ್ರತೆ ವಿಷಯವನ್ನೂ ಗಮನಿಸಬೇಕಾಗುತ್ತದೆ. ಅಂಚೆ ಇಲಾಖೆಯಲ್ಲಿ ಭದ್ರತೆಗೆ ಮೊದಲ ಆದ್ಯತೆ. ಆದ್ದರಿಂದ ಈ ಯೋಜನೆಯಡಿ ಖಾತೆ ತೆರೆಯಲು ಮಹಿಳೆಯರು ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ಪ್ರಧಾನ ಅಂಚೆಪಾಲಕ.