
ಬೆಳ್ತಂಗಡಿ: ನೆರಿಯ ರುದ್ರಭೂಮಿ ಗೊಂದಲದಿಂದ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದ ಮೃತದೇಹವನ್ನು ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ತಹಶೀಲ್ದಾರ್ ಪಂಚಾಯತ್ ಬಳಿಯೇ ಅಂತ್ಯಕ್ರಿಯೆ ನಡೆಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ನೆರಿಯ ಗ್ರಾ.ಪಂ. ವ್ಯಾಪ್ತಿಯಲ್ಲಿ ರುದ್ರಭೂಮಿ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಜ.14 ರಂದು ನೆರಿಯ ಗ್ರಾಮದ ಜನತಾ ಕಾಲನಿ ನಿವಾಸಿ ಸಂಜೀವಗೌಡ (49) ಅವರು ಮೃತಪಟ್ಟಿದ್ದು, ಮೃತರ ಅಂತ್ಯ ಸಂಸ್ಕಾರ ನಡೆಸಲು 25 ವರ್ಷಗಳ ಹಿಂದೆ ಇಟ್ಟಾಡಿ ಎಂಬ ಕುಂಮ್ಕಿ ಸ್ಥಳದಲ್ಲಿ ಕಾಯ್ದಿರಿಸಿದ್ದ 1.12 ಎಕ್ರೆ ಸ್ಥಳ ಬೇರೊಬ್ಬರ ಸ್ವಾಧೀನದಲ್ಲಿದ್ದು, ಅಲ್ಲಿಗೆ ತೆರಳಲು ಸೂಕ್ತ ರಸ್ತೆಯಿಲ್ಲ. ಮನೆಮಂದಿ ಅವರ ಮನೆಮುಂದೆ ಮೃತದೇಹ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಗಲಭೆ ಎಬ್ಬಿಸಿದರ ಪರಿಣಾಮ ಗ್ರಾಮಸ್ಥರು ನೆರಿಯ ಗ್ರಾ.ಪಂ. ಎದುರುಗಡೆ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು.
ಈ ವೇಳೆ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಟಿ. ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರು ಇಂದೇ ರುದ್ರಭೂಮಿಗೆ ಜಾಗ ಗುರುತಿಸಿ ಕೊಡಬೇಕು, ಅದೇ ಜಾಗದಲ್ಲಿ ಮೃತದೇಹದ ಅಂತ್ಯಸಂಸ್ಕಾರ ಮಾಡುವುದಾಗಿ ಪಟ್ಟು ಹಿಡಿದಿದ್ದರು.
ಈ ವೇಳೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಪಂಚಾಯತ್ ಬಳಿ ಇರುವ ಜಾಗವನ್ನು ಪರಿಶೀಲಿಸಿ ರುದ್ರಭೂಮಿಗೆ ಬೇಕಾಗಿರುವ ಸುಮಾರು 20 ಸೆಂಟ್ಸ್ ಸ್ಥಳ ಗುರುತಿಸಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಬಳಿಕ ಅದೇ ಜಾಗದಲ್ಲಿ ಸಂಜೀವ ಗೌಡ ಅವರ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡುವ ಮೂಲಕ ತಾರಕಕ್ಕೇರಿದ್ದ ನೆರಿಯ ರುದ್ರಭೂಮಿಗಾಗಿ ನಡೆಸಿದ್ದ ಪ್ರತಿಭಟನೆ ಸುಖಾಂತ್ಯಗೊಂಡಿದೆ.

