ಜೈಲಿನಲ್ಲಿ ಲವ್ ಮಾಡಿ 5 ದಿನದ ಪೆರೋಲ್‌ನಲ್ಲಿ ಬಂದು ಮದುವೆಯಾದ ಅಪರಾಧಿಗಳು

ಶೇರ್ ಮಾಡಿ

ಕಾರಣಗಳಿಲ್ಲದೆಯೂ ಪ್ರೀತಿ ಹುಟ್ಟಬಹುದು. ಒಂದು ನೋಟದಲ್ಲೂ ಪ್ರೀತಿ ಹುಟ್ಟಬಹುದು. ಸ್ನೇಹವಾಗಿ ಪ್ರೀತಿಯೂ ಆಗಬಹುದು. ಆದರೆ ಇಲ್ಲೊಂದು ಪ್ರೇಮಕಥೆ ಇವೆಲ್ಲಕ್ಕಿಂತ ಡಿಫ್ರೆಂಟ್‌ ಆಗಿದೆ.
ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಮತ್ತು ಪಶ್ಚಿಮ ಬಂಗಾಳದವರಾಗಿರುವ ಶಹನಾರಾ ಖಾತುನ್ ಅವರ ಲವ್‌ ಸ್ಟೋರಿ ಹುಟ್ಟಿದ್ದು ಕಾಲೇಜು, ಬಸ್‌ ಸ್ಟ್ಯಾಂಡ್‌ ಅಥವಾ ಬೇರೆಡೆಯಲ್ಲ. ಇವರು ಮೊದಲು ಭೇಟಿಯಾದದ್ದೇ ಜೈಲಿನಲ್ಲಿ.!
ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿ ಪೂರ್ವ ಬರ್ಧಮಾನ್ ಜಿಲ್ಲೆಯ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಒಂದೇ ಜೈಲಿನಲ್ಲಿದ್ದ ಇಬ್ಬರ ನಡುವೆ ಸ್ನೇಹ ಹುಟ್ಟಿಕೊಂಡಿದೆ. ದಿನಕಳೆದಂತೆ ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಜೈಲಿನಲ್ಲಿ ಶುರುವಾದ ಈ ಪ್ರೇಮದ ವಿಚಾರವನ್ನು ಇಬ್ಬರೂ ತಮ್ಮ ಮನೆಯವರ ಬಳಿ ಹೇಳಿದ್ದಾರೆ. ಇಬ್ಬರಿಗೂ ಮದುವೆ ಮಾಡಿಸಲು ಮನೆಯವರು ನಿರ್ಧಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಪೆರೋಲ್‌ ನಲ್ಲಿ 5 ದಿನಗಳಿಗಾಗಿ ಹೊರಗೆ ಬಂದಿದ್ದಾರೆ.
ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಪೂರ್ವ ಬರ್ಧಮಾನ್‌ನ ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಪೆರೋಲ್‌ ಅವಧಿ ಮುಗಿಯಲು ಇನ್ನು ಸ್ವಲ್ಪವೇ ಸಮಯವಿದೆ. ಆ ಬಳಿಕ ನವ ದಂಪತಿ ಮತ್ತೆ ಜೈಲಿಗೆ ಹೋಗಬೇಕಿದೆ.
ಕೊಲೆ ಪ್ರಕರಣದಲ್ಲಿ ಅಬ್ದುಲ್‌ ಹಸೀಮ್‌ ಅವರಿಗೆ 8 ವರ್ಷ ಶಿಕ್ಷೆಯನ್ನು ವಿಧಿಸಲಾಗಿದ್ದು, ಶಹನಾರಾ ಖಾತುನ್ ಅವರಿಗೆ 6 ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ.

Leave a Reply

error: Content is protected !!