ಸಮುದ್ರದ ಅಲೆಯ ಅಬ್ಬರಕ್ಕೆ ಮಕ್ಕಳ ಎದುರೇ ಕೊಚ್ಚಿಹೋದ ತಾಯಿ

ಶೇರ್ ಮಾಡಿ

ಪುಟ್ಟ ಮಕ್ಕಳ ಮುಂದೆಯೇ ತಾಯಿಯೊಬ್ಬಳು ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿರುವ ಹೃದಯ ವಿದ್ರಾವಕ ಘಟನೆ ಮುಂಬಯಿಯ ಬಾಂದ್ರಾದಲ್ಲಿರುವ ಬ್ಯಾಂಡ್‌ಸ್ಟ್ಯಾಂಡ್ ನಲ್ಲಿ ನಡೆದಿದೆ.
ಜ್ಯೋತಿ ಸೋನಾರ್(32) ಮೃತ ಮಹಿಳೆ.
ಜ್ಯೋತಿ ಸೋನಾರ್ ಅವರು ಪತಿ ಹಾಗೂ ತನ್ನ ಮಕ್ಕಳೊಂದಿಗೆ ಪಿಕ್‌ ನಿಕ್‌ ಗೆಂದು ಜುಹು ಚೌಪಾಟಿಗೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಜುಹು ಬೀಚ್‌ ಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಕಾರಣದಿಂದ ಕುಟುಂಬ ಬಾಂದ್ರಾಕ್ಕೆ ಬಂದಿತ್ತು.

ಬಾಂದ್ರಾಕ್ಕೆ ತಲುಪಿದ ಬಳಿಕ ಸಮುದ್ರದ ಬಳಿ ಜ್ಯೋತಿ ತನ್ನ ಪತಿಯ ಜತೆ ಫೋಟೋ ತೆಗೆಸಿಕೊಳ್ಳಲು ಬಂಡೆಯ ಮೇಲೆ ಕೂತಿದ್ದಾರೆ. ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದರೂ ಫೋಟೋಗಾಗಿ ಜ್ಯೋತಿ ಗಂಡನನ್ನು ಹಿಡಿದುಕೊಂಡು ಕೂತಿದ್ದಾರೆ. ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಟ್ಟು ಖುಷಿಯಿಂದ ಪೋಸ್‌ ಕೊಟ್ಟಿದ್ದಾರೆ.
ಆದರೆ ಇದೇ ವೇಳೆಗೆ ಜೋರಾಗಿ ಅಪ್ಪಳಿಸಿದ ಅಲೆಯೊಂದು ಒಂದೇ ಕ್ಷಣದಲ್ಲಿ ಜ್ಯೋತಿ ಅವರನ್ನು ಎಳೆದುಕೊಂಡೇ ಹೋಗಿದೆ. ಇದನ್ನು ನೋಡಿದ ಮಕ್ಕಳು “ಅಮ್ಮ ಅಮ್ಮ..” ಎಂದು ಕಿರುಚಾಡಲು ಶುರುಮಾಡಿದ್ದಾರೆ.
ಈ ವೇಳೆ ಅಲ್ಲೇ ಇದ್ದ ಸ್ಥಳೀಯ ನಿವಾಸಿ ಮುಕೇಶ್‌ ಎನ್ನುವ ಯುವಕ ಜ್ಯೋತಿ ಅವರ ಸೀರೆಯನ್ನು ಹಿಡಿದು ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಮುಕೇಶ್‌ ಕೂಡ ಈ ಪ್ರಯತ್ನದಲ್ಲಿ ಮುಳುಗುವ ಹಂತಕ್ಕೆ ಬಂದಾಗ ಮುಕೇಶ್‌ ಅವರ ಕಾಲನ್ನು ಬೇರೆ ಅವರು ಎಳೆದು ಹೊರಕ್ಕೆ ಎಳೆದಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಸತತ ಕಾರ್ಯಾಚರಣೆ ನಡೆಸಿ ಜ್ಯೋತಿ ಅವರ ಮೃತದೇಹವನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ವರದಿ ತಿಳಿಸಿದೆ.
ವಿಡಿಯೋ ತೆಗೆಯುತ್ತಿದ್ದ ಮಕ್ಕಳು ಮೊಬೈಲ್‌ ನಲ್ಲಿ ತಾಯಿ ಮುಳುಗುತ್ತಿರುವ ವಿಡಿಯೋ ಸೆರೆಯಾಗಿದ್ದು, ವೈರಲ್‌ ಆಗಿದೆ.

Leave a Reply

error: Content is protected !!