ಕಡಬ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಆರೋಪಿಗಳನ್ನು ಸುಮಾರು ಒಂದೂವರೆ ವರ್ಷಗಳ ನಂತರ ಕಡಬ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.ಬಂಧಿತ ಆರೋಪಿಗಳನ್ನು ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಎಂದು ಗುರುತಿಸಲಾಗಿದೆ.
ಆರೋಪಿಗಳು 2021 ರ ಡಿಸೆಂಬರ್ 13ರ ಹಾಡ ಹಗಲೇ ಪೇರಡ್ಕ ನಿವಾಸಿ ಸಾಜನ್ ಎಂಬವರ ಮನೆಯಿಂದ ಸುಮಾರು 41 ಗ್ರಾಂ. ಚಿನ್ನಾಭರಣವನ್ನು ಎಗರಿಸಿದ್ದರು. ಸಂಜೆ ವೇಳೆಗೆ ಸಾಜನ್ ಮನೆಗೆ ಬಂದಾಗ ಹಿಂಭಾಗದ ಬಾಗಿಲನ್ನು ಒಡೆದಿರುವುದು ಕಂಡುಬಂದಿದ್ದು, ಈ ಸಮಯದಲ್ಲಿ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. 24 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಸರ, ಹಾಗೂ 6 ಗ್ರಾಂ ತೂಕದ ಚಿನ್ನದ ಬೆಂಡೋಲೆ, ಮಕ್ಕಳ ಬೆಂಡೋಲೆಗಳು ಸೇರಿದಂತೆ 1.50 ಲಕ್ಷ ರೂ. ಮೌಲ್ಯದ ಸುಮಾರು 41 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪೈಕಿ ಸದ್ದಾಂ ಎಂಬಾತನು ಈ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ಮೊಬೈಲ್ ಸಿಡಿಆರ್ ಆಧಾರದಲ್ಲಿ ಕಳ್ಳತನ ಪ್ರಕರಣವನ್ನು ಒಂದೂವರೆ ವರ್ಷದ ನಂತರ ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ.