ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ವೀಡಿಯೊ ವಿವಾದವನ್ನು ಹುಟ್ಟುಹಾಕಿದೆ. ಸರ್ಕಾರ, ಪ್ರತಿಪಕ್ಷಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಕಿ-ಜೋ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುವ ಭಯಾನಕ ವೀಡಿಯೊ ಕಳೆದ ಬುಧವಾರ ವೈರಲ್ ಆಗಿತ್ತು. ಮೇ 4ರಂದು ನಡೆದ ಈ ಘಟನೆಯ ಬಗ್ಗೆ ದಾಖಲಾದ ಎಫ್ ಐಆರ್ ನಲ್ಲಿ ಓರ್ವ ಮಹಿಳೆಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ನಕಲಿ ಸುದ್ದಿಯೊಂದು ಮಣಿಪುರದ ಕಾಂಗ್ ಪೋಕ್ಪಿಯಲ್ಲಿ ನಡೆದ ಭಯಾನಕ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಸುದ್ದಿಯು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಲು ಗುಂಪನ್ನು ಪ್ರಚೋದಿಸಿತು ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ದೆಹಲಿಯಲ್ಲಿ ನಡೆದ ಅತ್ಯಾಚಾರದ ಸುದ್ದಿಯು ಮಣಿಪುರದ ಅತ್ಯಾಚಾರದಂತೆಯೇ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಇದು ಇಷ್ಟೆಲ್ಲಾ ಘಟನೆಗೆ ಕಾರಣವಾಗಿದೆ.
ಮಣಿಪುರದಲ್ಲಿ ನಿರ್ದಿಷ್ಟ ಸಮುದಾಯದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದ ಮಹಿಳೆಯ ಚಿತ್ರವನ್ನು ಮಣಿಪುರದ ಮಹಿಳೆ ಎಂದು ಹೇಳಿಕೊಂಡು ಪ್ರಸಾರ ಮಾಡಲಾಗಿತ್ತು. ಇದರಿಂದ ಆ ಗುಂಪು ಕೆರಳಿತ್ತು. ಆದರೆ, ಅತ್ಯಾಚಾರ ನಡೆದಿರುವುದು ದೆಹಲಿಯಲ್ಲಿ ಎಂಬುದು ನಂತರ ತಿಳಿದುಬಂದಿದೆ.
ಇದರಿಂದ ಪ್ರಚೋದನೆಗೆ ಒಳಗಾದ ಗುಂಪು ಕಾಂಗ್ ಪೊಕ್ಪಿಯಲ್ಲಿ ಊರನ್ನು ದಾಳಿ ಮಾಡಿದ ಗುಂಪು ಐವರನ್ನು ಅಪಹರಿಸಿತು. ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಅಂದರೆ ಮೇ 4 ರಂದು ಈ ಘಟನೆ ನಡೆದಿದೆ.
ಪೊಲೀಸ್ ದೂರಿನ ಪ್ರಕಾರ, ಅಂದಾಜು 800 ರಿಂದ 1,000 ಜನರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಬಿ.ಫೈನೋಮ್ ಗ್ರಾಮಕ್ಕೆ ನುಗ್ಗಿ ವ್ಯಾಪಕ ವಿನಾಶ ಮತ್ತು ಲೂಟಿ ಮಾಡಿದ್ದಾರೆ.