ಅರೆನಿದ್ರಾವಸ್ಥೆಯಲ್ಲಿ ಮನುಷ್ಯನಿಗೆ ಬೀಳುವ ಕನಸುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಮಹಾನುಭಾವ ತನಗೆ ಕೇವಲ ಒಳ್ಳೆಯ ಕನಸುಗಳಷ್ಟೇ ಬೀಳಬೇಕು, ಕೆಟ್ಟ ಕನಸುಗಳನ್ನು ನಿಯಂತ್ರಿಸಬೇಕು ಎಂದು ಯೋಚಿಸಿ ತಲೆಗೆ ಚಿಪ್ ಅಳವಡಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ. ಆದರೆ ಅವನ ಈ ಪ್ರಯೋಗ ಅವನನ್ನೇ ಆಸ್ಪತ್ರೆ ಪಾಲಾಗುವಂತೆ ಮಾಡಿದೆ.
ರಷ್ಯಾದ ನೊವೋಸಿಬಿರ್ಸ್ಕ್ ನಗರದ 40 ವರ್ಷದ ಮೈಕೆಲ್ ರಡುಗಾ ಎಂಬವನು ಕನಸುಗಳನ್ನು ನಿಯಂತ್ರಿಸಬೇಕೆಂಬ ಯೋಜನೆಯಿಂದ ತಲೆಯೊಳಗೆ ಚಿಪ್ ಅಳವಡಿಸಲು ಯೋಚಿಸಿದ್ದ. ಅಲ್ಲದೇ ಈ ಕುರಿತು ತನ್ನ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದ್ದ. ಈ ಪ್ರಯೋಗಕ್ಕಾಗಿ ತಾನು ಯೂಟ್ಯೂಬ್‌ನಲ್ಲಿ ನ್ಯೂರೋಸರ್ಜನ್‌ಗಳು ಯಾವ ರೀತಿಯಾಗಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸುತ್ತಾರೆ ಎಂಬ ವಿಡಿಯೋಗಳನ್ನು ನೋಡಿದ್ದೇನೆ ಎಂದು ತಿಳಿಸಿದ್ದ.
ಸುಮಾರು ಒಂದು ವರ್ಷದಿಂದಲೇ ಈ ಕುರಿತು ತಯಾರಿ ನಡೆಸುತ್ತಿದ್ದ ರಡುಗಾ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದಾನೆ. ಮೊದಲು ಯೋಜನೆಯನ್ನು ಒಬ್ಬ ಪರಿಣಿತ ನ್ಯೂರೋಸರ್ಜನ್ ಒಬ್ಬರಿಂದ ಮಾಡಿಸುವ ಯೋಜನೆ ಹಾಕಿಕೊಂಡಿದ್ದ. ಆದರೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲು ನ್ಯೂರೋಸರ್ಜನ್ ನಿರಾಕರಿಸಿದ್ದಾನೆ. ಹೀಗಾಗಿ ತಾನೇ ಸ್ವತಃ ತಲೆ ಕೊರೆಯುವ ಚಿಂತನೆ ನಡೆಸಿದ್ದಾನೆ.
ತನ್ನ ಯೋಜನೆಯನ್ನು ಪ್ರಯೋಗಿಸುವ ಉದ್ದೇಶದಿಂದ ಮೇ 17 ರಂದು ತಲೆಯನ್ನು ಕೊರೆದು ಎಲೆಕ್ಟ್ರೋಡ್ ಅಳವಡಿಸಲು ಮುಂದಾಗಿದ್ದ. ಆದರೆ ತೀವ್ರ ರಕ್ತಸ್ರಾವದ ಕಾರಣದಿಂದಾಗಿ ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ತನ್ನ ಪ್ರಯೋಗಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ 40 ವರ್ಷದ ರಡುಗಾ ಆಸ್ಪತ್ರೆ ಸೇರಿದ್ದಾನೆ. ರಡುಗಾ ದೇಹದಿಂದ 1 ಲೀಟರ್‌ನಷ್ಟು ರಕ್ತ ನಷ್ಟವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸ್ಟಿಚ್ ಮಾಡಿದ, ಬ್ಯಾಂಡೇಜ್‌ಗಳಿಂದ ಸುತ್ತಿರುವ ತನ್ನ ತಲೆಯ ಚಿತ್ರ ಮತ್ತು ತಲೆಯಲ್ಲಿ ಎಲೆಕ್ಟ್ರೋಡ್ ಅಳವಡಿಸಿರುವ ಎಕ್ಸ್‌ರೇ ಫೋಟೋ ಸಮೇತ ಆತ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ.