ಮಂಗಳೂರು: ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಹಿಂದೂಪರ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.
ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಎಂಬ ಮೂವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಲಾಗಿದೆ. ಕಾನೂನು ಸುವ್ಯವಸ್ಥೆ ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ.
ಇತ್ತೀಚೆಗೆ ನಡೆದ ಸುಲ್ತಾನ್ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರಿಗೆ ಸದ್ಯ ಶೋಕಾಸ್ ನೋಟಿಸ್ ನೀಡಿದ್ದು, ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆದೇಶ ಮಾಡುವ ಸಾಧ್ಯತೆಯಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂವರು ಹಿಂದೂ ಕಾರ್ಯಕರ್ತರಿಗೆ ಗಡಿಪಾರಿಗೆ ಸಿದ್ದತೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್, ನೈತಿಕ ಪೊಲೀಸ್ ಗಿರಿ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ಅವರನ್ನ ಗಡೀಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟೀಸ್ ಮಾಡಿದ್ದೇವೆ, ಗಡಿಪಾರು ಪ್ರಕ್ರಿಯೆ ಆಗಲಿದೆ ಎಂದು ತಿಳಿಸಿದರು.