ಸುಳ್ಳು ಸಾಲದ ಆ್ಯಪ್‌ ಬಲೆಗೆ ಬೀಳದಿರಿ: ಪೊಲೀಸ್‌ ಎಚ್ಚರಿಕೆ

ಶೇರ್ ಮಾಡಿ

ಮಂಗಳೂರು:ಸಾಮಾಜಿಕ ಜಾಲ ತಾಣಗಳಲ್ಲಿ ಪ್ರದರ್ಶಿಸಲಾದ ಸುಳ್ಳು ಸಾಲದ ಆ್ಯಪ್‌ ಗಳಿಂದ ವಂಚನೆಗೊಳಗಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದು, ಯಾವುದೇ ಕಾರಣಕ್ಕೂ ಇಂತಹ ಆ್ಯಪ್‌ಗಳ ಬಲೆಗೆ ಬೀಳಬಾರದು ಎಂದು ಮಂಗಳೂರು ಪೊಲೀಸ್‌ ಆಯುಕ್ತರು ಎಚ್ಚರಿಸಿದ್ದಾರೆ.
ಇಂತಹ ಮೋಸದ ಆ್ಯಪ್‌ಗಳನ್ನು ಪರಿಶೀಲನೆ ನಡೆಸದೆ ಡೌನ್‌ಲೋಡ್‌ ಮಾಡಿಕೊಳ್ಳುವುದು ಅಪಾಯಕಾರಿ. ಆ್ಯಪ್‌ನಲ್ಲಿ ಕಡಿಮೆ ದರದಲ್ಲಿ ಮತ್ತು ಆಕರ್ಷಕ ಬಡ್ಡಿ ದರದಲ್ಲಿ ಸುಲಭ ಮರುಪಾವತಿಯ ಆಸೆ ತೋರಿಸಿ ಸಾಲದ ಭರವಸೆ ನೀಡುತ್ತಾರೆ. ಪತ್ತೆಯಾಗದ ಮೂಲಗಳಿಂದ ಮಾಡಿದ ವಿಡಿಯೋ ಕಾಲ್‌ ಹಾಗೂ ಇಂಟರ್‌ನೆಟ್‌ ಕರೆಗಳ ಮೂಲಕ ಸಾರ್ವಜನಿಕರನ್ನು ಈ ಜಾಲಕ್ಕೆ ಸೆಳೆಯಲಾಗುತ್ತದೆ. ತಮಗೆ ಬರುವಂತಹ ಕಾಲ್‌ಗ‌ಳು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಿಂದ ಬರಲಾಗಿದೆ ಎಂಬ ಭರವಸೆಯನ್ನು ನೀಡಲಾಗುತ್ತದೆ.
ನೊಂದವರ ಬ್ಯಾಂಕ್‌ ಖಾತೆಯ ವಿವರ ಹಾಗೂ ಅವರ ವೈಯಕ್ತಿಕ ವಿವರ ಭಾವಚಿತ್ರಗಳ ಸಮೇತ ಲೋನ್‌ ಪ್ರಕ್ರಿಯೆಯನ್ನು ಪೂರೈಸುವ ನೆಪದಲ್ಲಿ ಪಡೆಯಲಾಗುತ್ತದೆ. ನಂತರ ಕೇಳಿದ ಸಾಲವನ್ನು ಅವರು ನೀಡಿದ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಅಂದಿನಿಂದಲೇ ಈ ಕರಾಳ ಸಾಲದ ಸುಳಿ ಪ್ರಾರಂಭವಾಗುತ್ತದೆ. ಇಂತಹ ಸೈಬರ್‌ ವಂಚಕರು ಪೀಡಿತರಿಗೆ ಸಾಲ ಮರುಪಾವತಿಯ ನೆಪದಲ್ಲಿ ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಅವರ ಬಳಿ ಇರುವ ಭಾವಚಿತ್ರಗಳು ಅಶ್ಲೀಲ ರೀತಿಯಲ್ಲಿ ಪ್ರಕಟಸುವ ಬೆದರಿಕೆಯನ್ನು ನೀಡುತ್ತಾರೆ. ಮತ್ತು ಪ್ರಕಟಿಸಿ ಕೂಡಾ ಅವರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಾರೆ. ಇಂತಹ ಲೋನ್‌ ಆ್ಯಪ್‌ಗಳನ್ನು ನಡೆಸುವವರು ಕಾನೂನು ಬಾಹಿರ ರೀತಿಯಲ್ಲಿ ನೊಂದವರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗ ಪಡಿಸಿ ಸಾಲ ವಸೂಲು ಮಾಡುತ್ತಾರೆ. ನೊಂದವರ ಜೀವಕ್ಕೆ ಬೆದರಿಕೆಯನ್ನು ಕೂಡಾ ನೀಡಲು ಹಿಂಜರಿಯುವುದಿಲ್ಲ. ಇಂತಹ ಜಾಲದಲ್ಲಿ ಸಿಲುಕಿದ ವ್ಯಕ್ತಿಯು ತಾನು ಪಡೆದ ಸಾಲಕ್ಕಿಂತ ಸಾಕಷ್ಟು ಜಾಸ್ತಿ ಹಣವನ್ನು ಇಂತಹ ಸೈಬರ್‌ ವಂಚಕರಿಗೆ ನೀಡುತ್ತಾರೆ.
ರುಪೀ ಹಿಯರ್‌, ಲೆಂಡ್‌ಕರ್‌, ಹೋಪ್‌ಲೋನ್‌, ಪಂಚ್‌ಲೋನ್‌, ರಾಕಾನ್‌, ಲೋನು, ಕ್ಯಾಶ್‌ಫುಲ್‌ ಮೊದಲಾದ ಚೀನಾ ಮೂಲದ ಆ್ಯಪ್‌ಗಳು ಕಾರ್ಯಾಚರಿಸುತ್ತಿವೆ. ಈಗಾಗಲೇ ಇಂತಹ 600 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಆದರೂ ಕೂಡ ಪ್ರತಿನಿತ್ಯ ಯಾವುದಾದರೂ ಹೊಸದೊಂದು ಲೋನ್‌ ಆ್ಯಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬರುತ್ತವೆ.
ಸಾರ್ವಜನಿಕರು ಇಂತಹ ಆ್ಯಪ್‌ಗಳನ್ನು ತಮ್ಮ ಮೊಬೈಲ್‌ಗ‌ಳಲ್ಲಿ ಡೌನ್‌ಲೋಡ್‌ ಮಾಡದೇ ಇರಲು ವಿನಂತಿಸಿದೆ. ತಮಗೆ ಆರ್ಥಿಕ ಸಾಲ ಬೇಕಾದಲ್ಲಿ ಅಧಿಕೃತ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯುವುದು ಸೂಕ್ತ. ಇಂತಹ ಯಾವುದಾದರೂ ಆ್ಯಪ್‌ಗಳ ಬಗ್ಗೆ ಮಾಹಿತಿ ಹೊಂದಿದಲ್ಲಿ ಕೂಡಲೇ ಆ ಮಾಹಿತಿಯನ್ನು ಪೊಲೀಸ್‌ ಇಲಾಖೆಗೆ ನೀಡಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!