ಪ್ರಿಯಕರನನ್ನು ಪ್ರೇಯಸಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನ: ಬಂಧನ

ಶೇರ್ ಮಾಡಿ

ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಪ್ರಿಯಕರನನ್ನು ಪ್ರೇಯಸಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವಿವೇಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಜೋಗೀಶ್‌(28) ಗಾಯಗೊಂಡವ.
ಕೃತ್ಯ ಎಸಗಿದ ಆತನ ಪ್ರೇಯಸಿ ಜುಂಟಿ ದಾಸ್‌(34) ಎಂಬಾಕೆ ಯನ್ನು ಬಂಧಿಸಲಾಗಿದೆ. ಅಸ್ಸಾಂ ಮೂಲದ ಜೋಗೀಶ್‌ ಮತ್ತು ಜುಂಟಿ ದಾಸ್‌ 3 ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು. ಜುಂಟಿ ದಾಸ್‌ಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದು, ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳು ಅಸ್ಸಾಂನಲ್ಲಿ ಸಂಬಂಧಿಕರ ಮನೆಯಲ್ಲಿದ್ದು, ಈಕೆ ಜಿಗಣಿಯಲ್ಲಿ ಒಂಟಿಯಾಗಿ ಖಾಸಗಿ ಕಂಪನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ಇನ್ನು ಜೋಗೀಶ್‌ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಒಂದು ವರ್ಷದ ಹಿಂದೆ ಇಬ್ಬರು ಪರಸ್ಪರ ಪರಿಚಯವಾಗಿ ಸ್ನೇಹ, ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಬಳಿಕ ಇಬ್ಬರು ವಿವೇಕನಗರದಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಜೋಗೀಶ್‌, ಜುಂಟಿ ದಾಸ್‌ರಿಂದ 15 ಸಾವಿರ ರೂ. ಪಡೆದುಕೊಂಡಿದ್ದ. ಆದರೆ, ವಾಪಸ್‌ ನೀಡಿರಲಿಲ್ಲ.
ಈ ಮಧ್ಯೆ ಜುಂಟಿ ದಾಸ್‌ಗೆ ಮದುವೆಯಾಗಿದ್ದು, ಈಗಾಗಲೇ 18 ವರ್ಷದ ಮಗಳಿದ್ದಾಳೆ ಎಂಬ ವಿಚಾರ ತಿಳಿದ ಜೋಗೀಶ್‌, ಆಕೆಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾನೆ. ಅಲ್ಲದೆ, ಬೇರೆ ಯುವತಿ ಜತೆ ಸಂಬಂಧ ಇಟ್ಟುಕೊಂಡು ಆಕೆ ಜತೆ ವಾಸಕ್ಕೆ ಸಿದ್ಧತೆ ನಡೆಸಿದ್ದ. ಈ ವಿಚಾರ ತಿಳಿದ ಜುಂಟಿದಾಸ್‌, ಆತನೊಂದಿಗೆ ಜಗಳವಾಡಿ ಮತ್ತೆ ಜಿಗಣಿಗೆ ಹೋಗಿದ್ದಳು. ಕಳೆದ ಶುಕ್ರವಾರ ಜೋಗೀಶ್‌ ಮನೆ ಬಳಿ ಬಂದ ಆಕೆ, ತನ್ನ 15 ಸಾವಿರ ರೂ. ಸಾಲ ವಾಪಸ್‌ ನೀಡುವಂತೆ ಗಲಾಟೆ ಆರಂಭಿಸಿದ್ದಾಳೆ. ಅದು ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಆಕೆ, ಚಾಕುವಿನಿಂದ ಆತನ ಹೊಟ್ಟೆ ಹಾಗೂ ಇತರೆ ಭಾಗಕ್ಕೆ ಇರಿದು ಪರಾರಿಯಾಗಿದ್ದಳು. ಜೋಗೀಶ್‌ನ ಕೂಗಾಟ ಕೇಳಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣ ದಾಖಲಾಗಿದೆ.

Leave a Reply

error: Content is protected !!