ಕಡಬ: ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯ, ದಕ್ಷಿಣ ಕನ್ನಡ ವಲಯದ ನೇತೃತ್ವದಲ್ಲಿ ಮಲಂಕರ ಕ್ಯಾಥೋಲಿಕ್ ಧರ್ಮಸಭೆಯ ಪುನರೇಕೀಕರಣದ ಶಿಲ್ಪಿ ಹಾಗೂ ದೈವದಾಸ ನಾಮಾಂಕಿತ ಆರ್ಚ್ ಬಿಷಪ್ ವಂದನೀಯ ಮಾರ್ ಈವಾನಿಯೋಸ್ ಅವರ 70ನೇ ಅನುಸ್ಮರಣಾ ವಾರ್ಷಿಕೋತ್ಸವವನ್ನು ಜು.23ರ ಭಾನುವಾರದಂದು ವಿಮಲಗಿರಿ ಸೈಂಟ್ ಮೆರೀಸ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ಆಚರಿಸಲಾಯಿತು.
ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಡಾ.ಎಲ್ದೋ ಪುತ್ತನ್‌ಕಂಡತ್ತಿಲ್ ಅವರ ಮುಖ್ಯ ಕಾರ್ಮಿಕತ್ವದಲ್ಲಿ ವಿವಿಧ ಚರ್ಚುಗಳ ಧರ್ಮಗುರುಗಳುಗಳ ಸಹಯೋಗದೊಂದಿಗೆ ಪವಿತ್ರ ದಿವ್ಯ ಬಲಿಪೂಜೆ ನಡೆಯಿತು. ದಿವ್ಯಬಲಿಪೂಜೆಯ ನಂತರದಲ್ಲಿ ವಿಮಲಗಿರಿ ಚರ್ಚಿನಿಂದ ನೂಜಿಬಾಳ್ತಿಲ ಸೈಂಟ್ ಮೇರೀಸ್ ಪ್ರೋ-ಕಥೇಟ್ರಲ್ ಚರ್ಚಿಗೆ ಎಂಸಿವೈಎಂ ನೇತೃತ್ವದಲ್ಲಿ ಮಾರ್ ಈವಾನಿಯೋಸರ ನಾಮಸ್ಮರಣಾ ಪಾದಯಾತ್ರೆ ನಡೆಯಿತು.
ಧಾರಾಕಾರವಾಗಿ ಸುರಿಯುವ ಮಳೆಯ ನಡುವೆಯೂ ನೂರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ನೂಜಿಬಾಳ್ತಿಲ ಪ್ರೋ- ಕಥೇಟ್ರಲ್ ಚರ್ಚಿನಲ್ಲಿ ಸಿಸ್ಟರ್ ಸ್ಟೆಫಿ ಥಾಮಸ್ ಅವರು ಮಾರ್ ಈವಾನಿಯೋಸರ ಅನುಸ್ಮರಣಾ ಸಂದೇಶವನ್ನು ನೀಡಿದರು. ಎಂಸಿಎ ದಕ್ಷಿಣ ಕನ್ನಡ ವಲಯದ ನೇತೃತ್ವದಲ್ಲಿ ಎಸ್‌ಎಸ್ಎಲ್‌ಸಿ ಯಲ್ಲಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಸುಮಾರು 46 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಧೂಪಪ್ರಾರ್ಥನೆ ಮೂಲಕ ವಿಶೇಷವಾದ ರೀತಿಯಲ್ಲಿ ಮಾರ್ ಈವಾನಿಯೋಸರ ಅನುಸ್ಮರಣಾ ಪ್ರಾರ್ಥನೆ ಹಾಗೂ ಆಶೀರ್ವಾದ ಪ್ರಾರ್ಥನೆಗಳೂ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ಚಾನ್ಸಿಲರ್ ರೆ.ಫಾ.ಜಾನ್ ಕುನ್ನತ್ತ್, ಎಂಸಿಎ ದಕ್ಷಿಣ ಕನ್ನಡ ವಲಯ ನಿರ್ದೇಶಕ ರೆ.ಫಾ ಕುರಿಯನ್ ಪುಲಿಪ್ಪರ, ಎಂಸಿವೈಎಂ ನಿರ್ದೇಶಕ ರೆ.ಫಾ ಜೋಸೆಫ್, ವಿವಿಧ ಸಂಘಟನೆಗಳ ನಿರ್ದೇಶಕರುಗಳಾದ ರೆ.ಫಾ ದಾನಿಯೇಲ್, ರೆ.ಫಾ ಜೈಸನ್, ರೆ.ಫಾ ಜೋಬ್, ರೆ.ಫಾ ಸೆಬಾಸ್ಟಿಯನ್, ರೆ.ಫಾ ವರ್ಗೀಸ್, ರೆ.ಫಾ ಪ್ರೇಮಾನಂದ್, ರೆ.ಫಾ ಜೋರ್ಜ್, ರೆ.ಫಾ ಜಾನ್, ರೆ.ಫಾ ಜೋಸೆಫ್,
ಪ್ಯಾಸ್ಟೋರಲ್ ಕೌನ್ಸಿಲ್ ಕಾರ್ಯದರ್ಶಿ ಪಿ.ಕೆ ಚೆರಿಯಾನ್, ಎಂಸಿಎ ದಕ್ಷಿಣ ಕನ್ನಡ ವಲಯದ ಅಧ್ಯಕ್ಷ ಸುಜಿತ್ ಪಿ.ಕೆ, ಕಾರ್ಯದರ್ಶಿ ವರ್ಗೀಸ್, ಎಂಸಿವೈಎಂ ಅಧ್ಯಕ್ಷ ಬಿನ್ಸನ್,ಸೇರಿದಂತೆ ಹಲವಾರು ಪ್ರಮುಖರು, ಧರ್ಮಗುರುಗಳುಗಳು, ಧರ್ಮಭಗಿನಿಯರು, ದಕ್ಷಿಣ ಕನ್ನಡ ವಲಯದ ಎಲ್ಲಾ ಚರ್ಚುಗಳಿಂದ ಭಕ್ತರೂ ಆಗಮಿಸಿದ್ದರು.