ಕಳ್ಳತನ ಮಾಡಲು ಬಂದ ಮನೆಯಲ್ಲಿ ಏನೂ ಸಿಗದ ಕಾರಣ 500 ರ ನೋಟು ಇಟ್ಟು ಹೋದ ಕಳ್ಳರು

ಶೇರ್ ಮಾಡಿ

ಕಳ್ಳತನ ಮಾಡಲು ಬಂದ ಮನೆಯಲ್ಲಿ ಏನೂ ಸಿಗದ ಕಾರಣಕ್ಕೆ ಕಳ್ಳರು ನಿರಾಶರಾಗಿ ಮನೆಯಲ್ಲಿ 500 ರೂಪಾಯಿಯ ನೋಟನ್ನು ಇಟ್ಟುಹೋದ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ದೆಹಲಿಯ ರೋಹಿಣಿ ಸೆಕ್ಟರ್ 8 ನಲ್ಲಿರುವ ಎಂ ರಾಮಕೃಷ್ಣ ಎನ್ನುವವರ ಮನೆಯ ಮುಖ್ಯ ಗೇಟ್‌ನ ಬೀಗ ಮುರಿದು ಕೆಲ ಕಳ್ಳರು ಕಳ್ಳತನ ಮಾಡಲು ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಮನಗಂಡ ಕಳ್ಳರು ಮನೆಯೊಳಗೆ ಹೋಗಿ ಎಲ್ಲಾ ಕಡೆ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇಡೀ ಮನೆಯಲ್ಲಿ ಏನೂ ಸಿಗದ ಕಾರಣ ಕಳ್ಳರು ವಾಪಾಸ್‌ ಹೋಗಿದ್ದಾರೆ. ಆದರೆ ವಾಪಾಸ್‌ ಹೋಗುವ ವೇಳೆ ಕಳ್ಳತನಕ್ಕೆಂದು ಬಂದ ಮನೆಯ ಮುಖ್ಯ ಗೇಟ್‌ ನಲ್ಲಿ 500 ರೂಪಾಯಿಯ ನೋಟನ್ನು ಇಟ್ಟು ತೆರಳಿದ್ದಾರೆ.
ಜುಲೈ 19ರ ಬುಧವಾರ ಬೆಳಗ್ಗೆ ಗುರುಗ್ರಾಮಕ್ಕೆ ಪತ್ನಿಯೊಂದಿಗೆ ತೆರಳಿದ್ದ ಎಂ ರಾಮಕೃಷ್ಣ ಮನೆಗೆ ಬಂದು ನೋಡುವಾಗ ಮುಖ್ಯ ಗೇಟ್‌ನ ಬೀಗ ಮುರಿದಿರುವುದು ಕಂಡು ಬಂದಿದೆ. ಈ ವೇಳೆ ಮನೆಯ ಒಳಗೆ ಹೋಗಿ ನೋಡಿದ್ದಾರೆ. ಆದರೆ ಮನೆಯಿಂದ ಯಾವ ವಸ್ತು ಕೂಡ ಕಾಣೆಯಾಗಿರಲಿಲ್ಲ. ಮುಖ್ಯ ಗೇಟ್‌ ನಲ್ಲಿ 500 ರೂಪಾಯಿಯ ನೋಟು ಇರುವುದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಟ್ಟಿರಲಿಲ್ಲ ಎಂದು ಎಂ ರಾಮಕೃಷ್ಣ ಪೊಲೀಸರಿಗೆ ತಿಳಿಸಿದ್ದಾರೆ. ದಂಪತಿ ಹಿಂತಿರುಗಿದಾಗ ಅಲ್ಮೇರಾಗಳು ಸಹ ಹಾಗೇ ಇದ್ದವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

error: Content is protected !!