ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿ ಮಗಳು ಗರ್ಭಿಣಿ: ಕಾಮುಕ ತಂದೆಗೆ ಜೀವಿತಾವಧಿ ಕಠಿಣ ಶಿಕ್ಷೆ

ಶೇರ್ ಮಾಡಿ

ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ಅಪರಾಧಿಗೆ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌ಸ್ ನ್ಯಾಯಾಲಯ ಜೀವಿತಾವಧಿಯವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರ 48 ವರ್ಷದ ವ್ಯಕ್ತಿ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ 2022ರ ಡಿ. 5ರಂದು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿತ್ತು. ನಗರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ನಿಶಾರಾಣಿ ಅವರು ಅಪರಾಧಿಗೆ ಆತ ಜೀವಂತ ಇರುವವರೆಗೂ ಕಠಿಣ ಜೈಲು ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 6 ಲಕ್ಷ ರೂ.ಗಳ ಹಣವನ್ನು 30 ದಿನಗಳ ಒಳಗೆ ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು. ತಂದೆಯೇ ಅಪರಾಧಿಯಾಗಿರುವುದರಿಂದ ನೊಂದ ಬಾಲಕಿಯ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ಪ್ರಕರಣದ ಸಂಖ್ಯೆ, ದಿನಾಂಕ, ಪೊಲೀಸ್ ಠಾಣೆಯ ಹೆಸರು ಹಾಗೂ ಇತರ ಮಾಹಿತಿಯನ್ನು ತಿಳಿಸಲಾಗಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

error: Content is protected !!