ಶಂಭೂರು: ಸೇನೆಗೆ ಸೇರಬೇಕು ಎಂಬ ಆಕಾಂಕ್ಷೆ ಮೊಳಕೆಯೊಡೆದದ್ದು ನನ್ನ ಪ್ರೌಢಶಾಲಾ ದಿನಗಳಲ್ಲಿ. ಅಂದು ತರಗತಿಯಲ್ಲಿ ಅಧ್ಯಾಪಕರು ಸೇನೆಗೆ ಸೇರುವುದರಿಂದ ಆಗುವ ಪ್ರಯೋಜನಗಳು ಮತ್ತು ಗೌರವಗಳ ಬಗ್ಗೆ ವಿವರಿಸಿದ್ದು ಮತ್ತು ಸೇನೆಗೆ ಸೇರಿ ಗೌರವ ಪಡೆಯುತ್ತಿದ್ದ ನನ್ನ ಸಂಬಂಧಿಗಳನ್ನು ನೋಡಿ ನಾನು ಸೈನ್ಯವನ್ನು ಸೇರಿದೆ. ಇದರಿಂದಾಗಿ ನಾನು ಇವತ್ತು ಸಮಾಜದಿಂದ ಗೌರವಿಸಲ್ಪಡುತ್ತಿದ್ದೇನೆ ಎಂದು ನಿವೃತ್ತ ಯೋಧ ಉಮೇಶ್ ಕೈರಂಗಳ ಅವರು ಹೇಳಿದರು.
ಅವರು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಜ್ಯೂನಿಯರ್ ಜೇಸಿ ವಿಭಾಗ, ಅಳುಪ ಸಮಾಜ ವಿಜ್ಞಾನ ಸಂಘ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇದರ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತಾನಾಡಿದರು.
ಕಾರ್ಗಿಲ್ ಸೇರಿದಂತೆ ಭಾರತದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಂದಾಗಿ ನಾವು ಇವತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಸೈನಿಕರಿಗೆ ನೀಡುವ ಗೌರವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಇದೇ ತರಹದ ಗೌರವವನ್ನು ನಮ್ಮ ಶಾಲೆಯಲ್ಲಿ ಪಡೆಯುವಂತಾಗಬೇಕು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಹರೀಶ್ ದೇವಂದಬೆಟ್ಟು, ಜೇಸಿಐ ಜೋಡುಮಾರ್ಗ ನೇತ್ರಾವತಿಯ ನಿಕಟ ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಶಿಕ್ಷಕರಾದ ಭಾರತಿಹರೀಶ್, ಪ್ರಕಾಶ್, ವರಮಹಾಲಕ್ಷ್ಮೀ, ಹರ್ಷ, ಶಾಲಾ ವಿದ್ಯಾರ್ಥಿ ನಾಯಕಿ ಸಾನ್ವಿ ಉಪಸ್ಥಿತರಿದ್ದರು.
ಜೇಜೇಸಿ ಅಧ್ಯಕ್ಷೆ ರಶ್ಮಿತಾ ಸ್ವಾಗತಿಸಿ, ಅಳುಪ ಸಮಾಜವಿಜ್ಞಾನ ಸಂಘದ ಅಧ್ಯಕ್ಷೆ ಮನಸ್ವಿ ವಂದಿಸಿದರು.