ಫ್ಯಾನ್ ಶರ್ಟ್! ಸೆಖೆಯಿಂದ ತಪ್ಪಿಸಿಕೊಳ್ಳಲು ಶರ್ಟ್‌ಗೆ ಫ್ಯಾನ್ ಅಳವಡಿಕೆ: ಆವಿಷ್ಕಾರಕ್ಕೆ ನೆಟ್ಟಿಗರ ಮೆಚ್ಚುಗೆ

ಶೇರ್ ಮಾಡಿ

ಜಪಾನ್ ತನ್ನ ಆವಿಷ್ಕಾರ ಮತ್ತು ಪ್ರಗತಿಗೆ ಹೆಸರುವಾಸಿಯಾದ ದೇಶಗಳಲ್ಲಿ ಒಂದು. ಇದೀಗ ಇದೇ ಜಪಾನ್‌ನಲ್ಲಿ ಸೆರೆಯಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಸುಡುವ ಶಾಖವನ್ನು ಎದುರಿಸುತ್ತಾ ಕರ್ತವ್ಯ ನಿರ್ವಹಿಸಲು ಸುಲಭವಾಗುವಂತಹ ನವೀನ ಉಡುಪಿನ ದೃಶ್ಯವಿದು. ಅದೇ ಫ್ಯಾನ್‌ ಶರ್ಟ್‌…! ಕೇಳುವಾಗಲೇ ಅಚ್ಚರಿಯಾಗಬಹುದು. ಸದ್ಯ ಇಂತಹದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.
ಸೂರ್ಯನ ಶಾಖವನ್ನು ಎದುರಿಸುತ್ತಾ ಯಾವುದೇ ಕರ್ತವ್ಯ ನಿರ್ವಹಿಸುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸಲು ಜಪಾನಿನಲ್ಲಿ ವಿನೂತನ ಶರ್ಟ್ ಅಭಿವೃದ್ಧಿಪಡಿಸಲಾಗಿದೆ. ಈ ವಿನೂತನ ಶರ್ಟ್‌ನ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.
@Rainmaker1973 ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಜೊತೆಗೆ ಇಲ್ಲಿ ಗಮನ ಸೆಳೆಯುವುದು ಈ ವ್ಯಕ್ತಿ ಧರಿಸಿದ ಶರ್ಟ್. ಗಾಳಿಯಿಂದ ತುಂಬಿರುವ ಶರ್ಟ್ ಇಲ್ಲಿ ಗಮನ ಸೆಳೆಯುತ್ತದೆ. ಈ ಶರ್ಟ್‌ನೊಳಗೆ ಗಾಳಿ ತುಂಬಲು ಕಾರಣವೂ ಇದೆ. ಅದು ಶರ್ಟ್‌ನಲ್ಲೇ ಅಳವಡಿಸಿರುವ ಫ್ಯಾನ್…! ಹೊರಗಿನ ಗಾಳಿಯನ್ನು ಸೆಳೆಯುವ ಸಲುವಾಗಿ ಫ್ಯಾನ್‌ಗಳನ್ನು ಅಳವಡಿಸುವ ಮೂಲಕ ಈ ಶರ್ಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಶರ್ಟ್‌ನಲ್ಲಿ ಅಳವಡಿಸಿರುವ ಈ ಫ್ಯಾನ್ ಬೆವರನ್ನು ಆವಿಯಾಗಿಸಲು ಮತ್ತು ಶಾಖದಿಂದ ದೇಹವನ್ನು ಮುಕ್ತಿಗೊಳಿಸಿ ತಂಪಾಗಿಸಲು ಸಹಾಯ ಮಾಡುತ್ತದೆ. ಲಭ್ಯ ಮಾಹಿತಿ ಪ್ರಕಾರ ಸೋನಿ ಮಾಜಿ ಇಂಜಿನಿಯರ್ ಇಚಿಗಯಾ ಹಿರೋಷಿ ವಿನ್ಯಾಸಗೊಳಿಸಿದ ಫ್ಯಾನ್ ಶರ್ಟ್‌ ಇದು. ಇವರು ಈಗ ತಮ್ಮದೇ ಆದ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಆವಿಷ್ಕಾರಕ್ಕೆ 2017ರಲ್ಲಿ ಕಂಪನಿ ಸರ್ಕಾರದ ಪ್ರಶಸ್ತಿಯನ್ನೂ ಪಡೆದಿತ್ತು.

ಇಲ್ಲಿದೆ ವಿಡಿಯೋ :
ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಜತೆಗೆ ಈ ವಿಶೇಷ ಶರ್ಟ್ ಬಗ್ಗೆ ನೆಟ್ಟಿಗರು ಕುತೂಹಲ ಹಾಗೂ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!