ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ಕರ್ನಾಟಕದ ನಾಲ್ವರು ಪೊಲೀಸರನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ, ಕರ್ನಾಟಕದಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಹಿಡಿಯಲು ವೈಟ್ ಫೀಲ್ಡ್ ಸೆನ್ ಠಾಣೆಯ ನಾಲ್ವರು ಪೊಲೀಸರು ತೆರಳಿದ್ದರು. ಇಬ್ಬರು ಶಂಕಿತ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು, ನಂತರ ಅವರನ್ನು ಬಿಟ್ಟು ಬಿಡಲು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಇಬ್ಬರು ಆರೋಪಿಗಳ ಪೈಕಿ ಒಬ್ಬನ ಪ್ರೇಯಸಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ನಾಲ್ವರು ಕರ್ನಾಟಕದ ಪೊಲೀಸರನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸರು ಇನ್ಸ್ಪೆಕ್ಟರ್ ಶಿವಪ್ರಕಾಶ್, ಶಿವಾನಿ, ವಿಜಯ್ ಕುಮಾರ್, ಸಂದೇಶ್ ಎನ್ನುವವರಾಗಿದ್ದಾರೆ.
ಕೇರಳ ಪೊಲೀಸರ ಪ್ರಕಾರ, ಕರ್ನಾಟಕದಲ್ಲಿ ನಡೆದ ಆನ್‌ಲೈನ್ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ್ ಮತ್ತು ನಿಖಿಲ್ ಎಂಬ ಇಬ್ಬರನ್ನು ಬಂಧಿಸಲು ಕರ್ನಾಟಕ ಪೊಲೀಸ್ ತಂಡವು ಆಗಸ್ಟ್ 1 ರಂದು ಕೊಚ್ಚಿಗೆ ಪ್ರಯಾಣ ಬೆಳೆಸಿದೆ. ಆರೋಪಿಗಳನ್ನು ನಾಲ್ವರು ಕರ್ನಾಟಕ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ, ನಂತರ ಅವರನ್ನು ಬಿಡುಗಡೆ ಮಾಡಲು ಪ್ರತಿಯೊಬ್ಬರಿಂದ 25 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಆರೋಪಿಗಳಲ್ಲಿ ಒಬ್ಬ 1 ಲಕ್ಷ ರೂ., ಇನ್ನೊಬ್ಬ 2.95 ಲಕ್ಷ ರೂ. ಹಣವನ್ನು ನೀಡಿದ ಬಳಿಕ, ಪ್ರೇಯಸಿಯ ಸಹಾಯದಿಂದ ಕೇರಳ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೇರಳ ಪೊಲೀಸರು ಕರ್ನಾಟಕ ಪೊಲೀಸರನ್ನು ಬಂಧಿಸಿ, ಅವರ ವಾಹನದಿಂದ 3.95 ಲಕ್ಷ ರೂ. ವಶ ಪಡಿಸಿಕೊಂಡಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಕರ್ನಾಟಕ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಕೊಚ್ಚಿ ತಲುಪಿದ್ದಾರೆ.