ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಿದೆ. ನಟಿಯ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾಗೆ ಸೋಲಾಗಿದೆ.
ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಚೆನ್ನೈನಲ್ಲೇ ಇವರ ಹೆಸರಿನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿತ್ತು.
ಈಗಾಗಲೇ ಅವರು ಮಾಲೀಕರಾಗಿರುವ ಆ ಎರಡೂ ಚಿತ್ರಮಂದಿರಗಳ ಮೇಲೆ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ. ಆದರೂ ಇ.ಎಸ್.ಐ ಕಟ್ ಮಾಡಿಯೂ ಕಾರ್ಮಿಕ ಇಲಾಖೆಗೆ ಅವರು ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳ ಆರೋಪವಾಗಿತ್ತು.