ಗೋಳಿತ್ತೊಟ್ಟು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತ್ತೊಟ್ಟು ಗ್ರಾಮದ ಮನಿಪುಲ ಎಂಬಲ್ಲಿ ಸ್ವಂತ ತಂದೆಯೇ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿಯ ಅಮ್ಮ, ಅಕ್ಕ, ಮತ್ತು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ಸಮಯ ಪರೀಕ್ಷೆಗೆ ಓದಿಕೊಳ್ಳಲೆಂದು ಈಕೆ ಮನೆಯಲ್ಲೇ ಉಳಿದುಕೊಂಡಿದ್ದಳು. ಇದೇ ಸಮಯವನ್ನು ದುರುಪಯೋಗಿಸಿಕೊಂಡ ತಂದೆ ಚಂದಪ್ಪ ನಾಯ್ಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಳಿಕ ಈ ವಿಚಾರವನ್ನು ಅಮ್ಮನಲ್ಲಿ ಹೇಳಿದರೆ ತಾನು ನೇಣು ಹಾಕಿಕೊಂಡು ಸಾಯುವುದಾಗಿ ಬೆದರಿಸಿದ್ದಾನೆ. ಅಲ್ಲದೆ ಇದನ್ನು ನೆಪವಾಗಿಟ್ಟುಕೊಂಡು ನಿರಂತರವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಕೂಡ ಎಸಗಿದ್ದ. ಆಗಸ್ಟ್ 15ರಂದು ಹುಡುಗಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ತಾಯಿ ಪ್ರಶ್ನಿಸಿದ್ದಾಳೆ. ಆಗ ಮಗಳು ಎಲ್ಲಾ ವಿಚಾರವನ್ನು ತಾಯಿಯಲ್ಲಿ ತಿಳಿಸಿದ್ದಾಳೆ. ಬಳಿಕ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆ 5 ತಿಂಗಳ ಗರ್ಭಿಣಿ ಎಂದು ವೈದ್ಯರು ತಿಳಿಸಿರುತ್ತಾರೆ. ತಂದೆಯ ಈ ಅಮಾನುಷ ಕೃತ್ಯದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಆ.16ರಂದು ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.