ಕರಾವಳಿಯ ಸೇನಾ ತರಬೇತಿ ಶಾಲೆಗೆ ಬೀಗ? ವೇತನವಿಲ್ಲ, ಸಿಬಂದಿಯೂ ಅತಂತ್ರ

ಶೇರ್ ಮಾಡಿ

ಕರಾವಳಿಯ ಜಿಲ್ಲೆಗಳ ಹಿಂದುಳಿದ ವರ್ಗಗಳ ಯುವಕರು ಮಿಲಿಟರಿಗೆ ಸೇರ್ಪಡೆಯಾಗಲು ಅಗತ್ಯ ತರಬೇತಿ ಒದಗಿಸುತ್ತಿದ್ದ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗಳು ಬಹುತೇಕ ಮುಚ್ಚುವ ಸ್ಥಿತಿಯಲ್ಲಿವೆ.
ಇಲ್ಲಿರುವ ತರಬೇತುದಾರರಿಗೆ ನಾಲ್ಕು ತಿಂಗಳುಗಳಿಂದ ವೇತನ ಆಗಿಲ್ಲ. ಈ ಬಾರಿ ಹೊಸ ಬ್ಯಾಚ್‌ಗೆ ತರಬೇತಿ ಆರಂಭಿಸುವುದಕ್ಕೂ ಅನುದಾನವಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಈ ಕುರಿತು ಯತ್ನಿಸುತ್ತಿದ್ದರೂ ಹಣಕಾಸು ಇಲಾಖೆ ಯಿಂದ ಅನುಮೋದನೆ ಸಿಕ್ಕಿಲ್ಲ.
ಕರಾವಳಿಯಲ್ಲಿ ಹಿಂದಿನಿಂದಲೂ ಮಿಲಿಟರಿಗೆ ಸೇರುವವರ ಸಂಖ್ಯೆ ಕಡಿಮೆ. ಕೇಂದ್ರ ಸರಕಾರ ಆರಂಭಿಸಿರುವ ಅಗ್ನಿವೀರ್‌ ಸಹಿತ ಮಿಲಿಟರಿ, ಪೊಲೀಸ್‌ ಸೇವೆಗೆ ಸೇರುವುದಕ್ಕೆ ಹಿಂದುಳಿದ ವರ್ಗದ ಯುವಕರಿಗೆ ಈ ತರಬೇತಿ ಶಾಲೆಗಳು ಉತ್ತಮ ವೇದಿಕೆಯಾಗಿದ್ದವು. ಈಗ ಆ ಸಾಧ್ಯತೆಯ ಬಾಗಿಲು ಮುಚ್ಚಿದಂತಾಗಿದೆ.
ಮೂರೂ ಜಿಲ್ಲೆಗಳಲ್ಲಿ ತಲಾ 100 ಮಂದಿ ಯುವಕರಿಗೆ ವರ್ಷಕ್ಕೆ ಮೂರು ಬ್ಯಾಚ್‌ಗಳಂತೆ ಸೇನಾ ಆಯ್ಕೆ ಪೂರ್ವ ತರಬೇತಿ ನೀಡುವ ಅಪ ರೂಪದ ಯೋಜನೆ ಇದಾಗಿತ್ತು. ಹಿಂದಿನ ಸರಕಾರ ಇದಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ತರಬೇತಿಗಳ ಅಡಿಯಲ್ಲಿ ಪ್ರತ್ಯೇಕ ಉಪ ವಿಭಾಗ ಸೃಷ್ಟಿಸಿತ್ತು. ಅದರಡಿಯಲ್ಲಿ ದ.ಕ. ಜಿಲ್ಲೆಗೆ 28 ಲಕ್ಷ ರೂ. ಹಾಗೂ ಉಡುಪಿ ಜಿಲ್ಲೆಗೆ 53 ಲಕ್ಷ ರೂ. ವೆಚ್ಚದಲ್ಲಿ ತರಬೇತಿ ಶಾಲೆ ಸ್ಥಾಪಿಸಲಾಗಿದೆ. ದ.ಕ. ಜಿಲ್ಲೆಯ ಶಾಲೆಗೆ ರಾಣಿ ಅಬ್ಬಕ್ಕನ ಹೆಸರಿದ್ದರೆ ಉಡುಪಿ ಜಿಲ್ಲೆಯ ತರಬೇತಿ ಶಾಲೆಗೆ ಕೋಟಿ ಚೆನ್ನಯ ಹಾಗೂ ಉ.ಕ.ಜಿಲ್ಲೆಯ ತರಬೇತಿ ಶಾಲೆಗೆ ಹೆಂಜಾ ನಾೖಕ್‌ ಹೆಸರಿಡಲಾಗಿದೆ.
ಕಳೆದ ನವೆಂಬರ್‌ನಿಂದ ಫೆಬ್ರವರಿ ವರೆಗೆ ಮೊದಲ ಬ್ಯಾಚ್‌, ಮಾರ್ಚ್‌ನಿಂದ ಜೂನ್‌ ವರೆಗೆ ಎರಡನೇ ಬ್ಯಾಚ್‌ನಲ್ಲಿ ತರಬೇತಿ ನೀಡಲಾಗಿದೆ.
ಇಲ್ಲಿ ನಿವೃತ್ತ ಸೇನಾಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಾಲೆ ಬಗ್ಗೆ ಸಾಕಷ್ಟು ಪ್ರಚಾರ ಸಿಕ್ಕಿರುವುದರಿಂದ ಸ್ಥಳೀಯ ಯುವಕ ರಿಂದಲೇ ಬೇಡಿಕೆ ಬರುತ್ತಿದೆ. ಆದರೆ ಅನುದಾನ ಬಿಡುಗಡೆಯಾಗದೆ ಯೋಜನೆಯೇ ಅತಂತ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
217 ಮಂದಿಗೆ ತರಬೇತಿ; 73 ಮಂದಿಗೆ ಉದ್ಯೋಗ
ಉಡುಪಿ ಜಿಲ್ಲೆಯಲ್ಲಿ ತರಬೇತಿ ಪಡೆದ 128 ಮಂದಿಯಲ್ಲಿ 53 ಮಂದಿ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಇದರಲ್ಲಿ 16 ಮಂದಿ ಅಗ್ನಿವೀರ, 7 ಮಂದಿ ಬಿಎಎಸ್‌ಎಫ್‌, ಇಬ್ಬರು ಸಿಎಎಸ್‌ಎಫ್‌ ಹಾಗೂ 28 ಮಂದಿ ಸಿಆರ್‌ಪಿಎಫ್‌ಗೆ ಸೇರ್ಪಡೆಯಾಗಿದ್ದಾರೆ. ಇನ್ನಷ್ಟು ಮಂದಿ ಬೆಳಗಾವಿಯಲ್ಲಿ ನಡೆಯುವ ಸೇನಾ ಸೇರ್ಪಡೆ ರ್ಯಾಲಿಗೆ ಹೋಗುವ ನಿರೀಕ್ಷೆ ಇದೆ. ದ.ಕ. ಜಿಲ್ಲೆಯಲ್ಲಿ ತರಬೇತಿ ಪಡೆದ 89 ಮಂದಿಯಲ್ಲಿ 18 ಮಂದಿ ಅಗ್ನಿವೀರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಆದೇಶಕ್ಕೆ ಕಾಯುತ್ತಿದ್ದಾರೆ, ಓರ್ವ ಬಿಎಎಸ್‌ಎಫ್‌ ಹಾಗೂ ಇನ್ನೋರ್ವ ಸಿಎಎಸ್‌ಎಫ್‌ಗೆ ಸೇರ್ಪಡೆಯಾಗಿದ್ದಾರೆ.

ವೇತನವಿಲ್ಲ, ಸಿಬಂದಿಯೂ ಅತಂತ್ರ
ಎಪ್ರಿಲ್‌ ಅನಂತರ ಈ ತರಬೇತಿ ಶಾಲೆಗಳ ಸಿಬಂದಿಗೆ ವೇತನ ಕೊಟ್ಟಿಲ್ಲ. ಇದರಲ್ಲಿ ನಿವೃತ್ತ ಹಿರಿಯ ಸೇನಾಧಿಕಾರಿಗಳೂ ಸೇರಿದ್ದಾರೆ. ಇದಕ್ಕೆ ಬೇಕಾದ ಕೆಲವು ಗುತ್ತಿಗೆ ಆಧಾರಿತ ಸಿಬಂದಿಯನ್ನು ಹಿಂದುಳಿದ ವರ್ಗಗಳ ಕೆಲವು ಹಾಸ್ಟೆಲ್‌ಗ‌ಳಿಂದಲೂ ನಿಯೋಜನೆಯಲ್ಲಿ ಕರೆತಂದಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ. ಇನ್ನು ಈ ಸೇನಾ ತರಬೇತಿ ಶಾಲೆಗಳಿಗೆ ಲಕ್ಷಾಂತರ ರೂ. ವೆಚ್ಚ ಮಾಡಿ ಟೇಬಲ್‌, ಬೆಡ್‌, ತರಬೇತಿ ಪರಿಕರಗಳನ್ನು ಖರೀದಿಸಲಾಗಿದೆ. ಈ ಶಾಲೆಯೇ ನಿಂತುಹೋದರೆ ಲಕ್ಷಾಂತರ ರೂ. ವ್ಯರ್ಥವಾಗುವ ಭೀತಿ ಎದುರಾಗಿದೆ.

 

Leave a Reply

error: Content is protected !!