ನೇಸರ ಜ.21: ರಾಜ್ಯದಲ್ಲಿ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂವನ್ನು ಕೊನೆಗೊಳಿಸಬೇಕು ಎಂಬ ಒತ್ತಡ ಜೋರಾಗಿದೆ.ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಸೋಂಕು ಅಪಾಯಕಾರಿಯಾಗಿಲ್ಲ.ಹೀಗಾಗಿ ನಿರ್ಬಂಧಗಳ ಹೆಸರಿನಲ್ಲಿ ಜನಜೀವನವನ್ನು ಸಂಕಷ್ಟದಲ್ಲಿ ಸಿಲುಕಿಸುವುದು,ಉದ್ಯಮಗಳು ನೆಲ ಕಚ್ಚುವಂತೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಎಲ್ಲ ಕಡೆಯಿಂದ ಕೇಳಿಬಂದಿದೆ.ಉದ್ಯಮ, ವ್ಯಾಪಾರ ವಲಯ ಮಾತ್ರವಲ್ಲ ಸಚಿವರೂ ಸೇರಿದಂತೆ ಬಿಜೆಪಿ ನಾಯಕರೇ ಕರ್ಫ್ಯೂ ರದ್ದತಿಗೆ ಒತ್ತಡ ಹಾಕುತ್ತಿದ್ದಾರೆ.
ಮೂರನೇ ಅಲೆ ಆರಂಭಗೊಂಡು ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 5 ರಿಂದ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು.ಮುಂದಿನ ಎರಡು ವಾರ ವೀಕೆಂಡ್ ಕರ್ಫ್ಯೂ ನಡೆದಿದೆ.ಮೂರನೇ ಅಲೆಯನ್ನು ಎದುರಿಸಲು ಕರ್ಫ್ಯೂ ಅಗತ್ಯವಿಲ್ಲ ಎಂಬ ಅಭಿಪ್ರಾಯ ಬಲವಾಗುತ್ತಿದೆ.ಹೀಗಾಗಿ,ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸುವುದಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ಶುಕ್ರವಾರ ನಡೆಯಲಿದೆ.ಇದರಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬುದು ನಿರ್ಧಾರವಾಗಲಿದೆ.
ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆಯುವ ಸಭೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಆರ್. ಅಶೋಕ್, ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ತಾಂತ್ರಿಕ ಸಲಹಾ ಸಮಿತಿಯ ವರದಿ,ನಾನಾ ವಲಯಗಳ ಪ್ರಮುಖರ ಒತ್ತಾಯ,ಸಾರ್ವಜನಿಕರ ನಿರೀಕ್ಷೆ, ಕೋವಿಡ್ ಸ್ಥಿತಿಗತಿ,ಆಸ್ಪತ್ರೆಗೆ ದಾಖಲಾತಿ – ಸಾವಿನ ಪ್ರಮಾಣ,ಕೇಂದ್ರ ಸರಕಾರದ ಮಾನದಂಡ ಸೇರಿದಂತೆ ಇತರೆ ಅಂಶಗಳನ್ನು ಪರಾಮರ್ಶಿಸಿ ಸಿಎಂ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.