ಕೊಕ್ಕಡ-ನೆಲ್ಯಾಡಿ ಸಂಪರ್ಕಿಸುವ ಪುತ್ಯೆ ರಸ್ತೆಗೆ ದುರಸ್ತಿ ಭಾಗ್ಯ ಯಾವಾಗ? 800 ಮೀಟರ್‌ನ ಬೃಹತ್ ಹೊಂಡಮಯ ರಸ್ತೆಗೆ ನೂತನ ಶಾಸಕಿ ಮುಕ್ತಿ ದೊರಕಿಸಿಕೊಟ್ಟಾರೆ ?!!!

ಶೇರ್ ಮಾಡಿ

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮೂಲಕ ನೆಲ್ಯಾಡಿ ಪೇಟೆಯನ್ನು ಸಂಪರ್ಕಿಸುವ ಪುತ್ಯೆ ಪ್ರದೇಶದ 800 ಮೀಟರ್ ರಸ್ತೆ ಡಾಂಬರು ಅಥವಾ ಕಾಂಕ್ರೀಟ್ ಕಾಣದೆ ದಶಕಗಳ ಕಾಲವೇ ಸಂದಿದೆ.

ದಿನಂಪ್ರತಿ ನೂರಾರು ನೌಕರರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಶ್ರೀ ಕ್ಷೇತ್ರ ಕೊಕ್ಕಡ, ಸೌತಡ್ಕ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುವ ಭಕ್ತರೂ ಕೂಡ ಈ ರಸ್ತೆ ಸಮೀಪದ
ರಸ್ತೆಯೆಂದು ಇದರ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಸರ್ವಋತು ರಸ್ತೆ ದುರಸ್ತಿಗೊಳ್ಳಲೇ ಇಲ್ಲ. ಈ ರಸ್ತೆಯು ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಗಡಿ ಭಾಗವಾಗಿದ್ದು, ಎರಡು ತಾಲೂಕುಗಳ ಸೇರುವ ಜಾಗದಲ್ಲಿ ಸುಂದರ ರಸ್ತೆ ಕಾಣಬೇಕಿತ್ತು, ಆದರೆ ಸಂಪೂರ್ಣ ಸೌಲಭ್ಯಗಳಿಂದ ವಂಚಿತವಾಗಿ ದಿನಂಪ್ರತಿ ಪ್ರಯಾಣಿಕರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಎದ್ದು ಬಿದ್ದು ಸಂಚರಿಸುವ ಪರಿಸ್ಥಿತಿ ಬಂದಿದೆ.

ಪುತ್ಯೆ ಸೇತುವೆಯಿಂದ ನೆಲ್ಯಾಡಿಗೆ ಹೋಗುವ ಪ್ರದೇಶ ಇಳಿಜಾರು ಹಾಗೂ ತಿರುವುಗಳಿಂದ ಕೂಡಿದ ಕಡಿದಾದ ರಸ್ತೆಯಾಗಿದ್ದು, ಈ ಮಾರ್ಗದ ಮೂಲಕ ಸಂಚರಿಸಿದರೆ ರಾ.ಹೆ.75ರ ನೆಲ್ಯಾಡಿ ಪ್ರದೇಶವನ್ನು ಕೇವಲ 2.5ಕಿ.ಮೀ ಮೂಲಕ ಸೇರಬಹುದು. ಆದರೆ ಈ ರಸ್ತೆ ಸಂಪೂರ್ಣ ಹೊಂಡಮಯವಾಗಿರುವ ಕಾರಣ ಕೊಕ್ಕಡ-ಪೆರಿಯಶಾಂತಿ ರಸ್ತೆಯ ಮೂಲಕ ಸುತ್ತುವರಿದು ನೆಲ್ಯಾಡಿ ತಲುಪುವ ದುಸ್ಥಿತಿ ಬಂದೊದಗಿದೆ.ಈ ಪ್ರಯಾಣ ಪ್ರಯಾಣಿಕರಿಗೆ ಸುಮಾರು 9ಕಿ.ಮೀನಷ್ಟು ನಷ್ಟವನ್ನು ತಂದೊಡ್ಡುತ್ತಿದೆ. ಈ ಬಗ್ಗೆ ಪಲಾನುಭವಿಗಳು, ಮಾಧ್ಯಮದ ಮುಖಾಂತರ ಹಾಗೂ ಪಂಚಾಯತ್ ಮಟ್ಟದಿಂದ ಶಾಸಕರು, ಸಚಿವರವರೆಗೂ ದುರಸ್ತಿಗೊಳಿಸುವಂತೆ ಮನವಿ ನೀಡಿದರು ಕ್ಯಾರೆ ಎನ್ನಲಿಲ್ಲ. ವಿಧಾನಸಭಾ ಚುನಾವಣೆಯ ಸಂದರ್ಭ ಈ ಭಾಗದ ಜನರು ಮತದಾನ ಬಹಿಷ್ಕರಿಸುವ ಯೋಚನೆಗೆ ಇಳಿದಿದ್ದರು. ಆದರೆ ಅಭ್ಯರ್ಥಿಗಳು, ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿಗೊಳಿಸುವ ಭರವಸೆ ನೀಡಿದ ಕಾರಣ ಬಹಿಷ್ಕಾರವನ್ನು ಹಿಂತೆಗೆದುಕೊಂಡರು. ಚುನಾವಣೆ ಮುಗಿದು ತಿಂಗಳು ಮೂರು ಕಳೆದರೂ ಭರವಸೆ ಭರವಸೆಯಾಗಿ ಉಳಿದುಕೊಂಡು ಹೊಂಡಮಯ ರಸ್ತೆಯ ಪರಿಸ್ಥಿತಿ ಕಿಂಚಿತ್ತೂ ಸುಧಾರಣೆಯಾಗಲಿಲ್ಲ.


ಕೆಲ ದಿನಗಳ ಹಿಂದೆ ಕ್ಷೇತ್ರದ ಶಾಸಕಿ ನೆಲ್ಯಾಡಿಗೆ ಆಗಮಿಸಿದ ಸಂದರ್ಭ ಸ್ಥಳೀಯ ಪಲಾನುಭವಿಗಳು ಈ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಅನುದಾನ ಬಿಡುಗಡೆಗೆ ಪ್ರಯತ್ನಿಸುವಂತೆ ಒತ್ತಾಯಿಸಿದ್ದರು. ಕಳೆದ 10 ವರ್ಷದಿಂದ ಈ ರಸ್ತೆ ನೆನೆಗುದಿಗೆ ಬಿದ್ದ ವಿಚಾರವನ್ನು ತರುವಲ್ಲಿ ಶಾಸಕರ ಗಮನ ಸೆಳೆದರು. ತಕ್ಷಣವೇ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ವಿಶೇಷ ಅನುದಾನದಲ್ಲಿ ಪುತ್ಯೆ ಭಾಗದ ಹೊಂಡಮಯ 800 ಮೀ. ರಸ್ತೆಗೆ ಸಂಪೂರ್ಣ ಕಾಂಕ್ರೀಟಿಕರಣಕ್ಕಾಗಿ 1 ಕೋಟಿ ರೂ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ತಕ್ಷಣವೇ ಈ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ಸಂಚಾರ ಯೋಗ್ಯ ರಸ್ತೆಯಾಗಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಅಭಿಯಂತರರಿಗೆ ದೂರವಾಣಿ ಮೂಲಕ ಆದೇಶಿಸಿದ್ದಾರೆ. ಆದರೆ ಇದುವರೆಗೂ ಈ ರಸ್ತೆ ಎಳ್ಳಷ್ಟೂ ಅಭಿವೃದ್ದಿಯಾಗಿಲ್ಲ.

ಪುತ್ಯೆ ರಸ್ತೆಯ ಸಮಸ್ಯೆಯ ಬಗ್ಗೆ ನನಗೆ ಅರಿವಿದೆ. ಈಗಾಗಲೇ ಲೋಕೋಪಯೋಗಿ ಸಚಿವರಿಗೆ ವಿಶೇಷ ಅನುದಾನದಲ್ಲಿ ಸೇರಿಸುವಂತೆ ಮನವಿ ನೀಡಿದ್ದೇನೆ. ಅಲ್ಲದೆ ಲೋಕೋಪಯೋಗಿ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಅಭಿಯಂತರರಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿ ತಕ್ಷಣವೇ ಹೊಂಡವನ್ನು ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದೇನೆ.
ಭಾಗೀರಥಿ ಮುರುಳ್ಯ
ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ

ಕೊಕ್ಕಡ ನೆಲ್ಯಾಡಿಯ ಮಧ್ಯೆ ಇರುವ ಪುತ್ಯೆ ಭಾಗದಲ್ಲಿರವ ನಾವು ನತದೃಷ್ಟರು ಎಂದು ಭಾಸವಾಗಲು ಆರಂಭವಾಗಿದೆ. ಪ್ರತೀ ದಿನ ಈ ರಸ್ತೆಯಲ್ಲಿ ನಾನಾ ಪಕ್ಷದ ಜನಪ್ರತಿನಿಧಿಗಳು ಸಂಚರಿಸುತ್ತಿದ್ದರೂ ಯಾರೋಬ್ಬರಿಗೂ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಎನಿಸಲಿಲ್ಲ. ಇದು ಸಾರ್ವಾಜನಿಕ ರಸ್ತೆಯಾಗಿದ್ದು ರಾ.ಹೆ.ಯಾಗಿ ಮೇಲ್ದರ್ಜೆಗೇರಿ 2.5 ವರ್ಷವಾದರೂ ಇದುವರೆಗೆ ಕಿಂಚಿತ್ತು ಅನುದಾನ ಕೂಡ ಈ ರಸ್ತೆಗೆ ಸಿಕ್ಕಿಲ್ಲ. ಇದು ಈ ಬಾಗದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಬದ್ದತೆ ಮತ್ತು ಕಾಳಜಿಯು ಎಷ್ಟಿದೆ ಎಂಬುದನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ಆಗೊಮ್ಮ ಈಗೊಮ್ಮ ತೇಪೆ ಹಾಕುವ ಕಾರ್ಯ ನಡೆದರೂ ಅದು ಸಂಪೂರ್ಣ ಅವೈಜ್ಞಾನಿಕೆಯಿಂದ ಕೂಡಿದ್ದು ಸಣ್ಣ ಮಳೆಗೂ ಕಿತ್ತು ಬರುತ್ತಿದೆ.
ಶಾಂತರಾಮ ಎ
ಹೊಸ ಆರಿಗ ಮನೆ, ಪುತ್ಯೆ-ಕೊಕ್ಕಡ

Leave a Reply

error: Content is protected !!