ನೇಸರ ಜ.21: ಮೂಡುಬಿದಿರೆ ಗಂಟಲ್ಕಟ್ಟೆ ಬಳಿ ಗುರುವಾರ ಬೆಳಗ್ಗೆ ಬೈಕ್-ಓಮಿನಿ ಮಧ್ಯೆ ನಡೆದ ಅಪಘಾತದಲ್ಲಿ ಹಿರಿಯಡ್ಕ ಮೇಳದ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್(46) ಮೃತಪಟ್ಟಿದ್ದಾರೆ. ಹಿರಿಯಡ್ಕ ಮೇಳದಲ್ಲಿ ಸ್ತ್ರಿವೇಷ, ಕಥಾನಾಯಕನ ಪಾತ್ರದಲ್ಲಿ ಪ್ರಸಿದ್ಧ ಕಲಾವಿದರಾಗಿದ್ದರು.
ಬುಧವಾರ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನವನ್ನು ಮುಗಿಸಿ ಬೆಳ್ತಂಗಡಿ ಗೋಳಿತ್ತಾರು ಮನೆಗೆ ಹೋಗುವಾಗ ಬೆಳಗ್ಗೆ 6.30ರ ವೇಳೆ ಅಪಘಾತ ಸಂಭವಿಸಿದೆ. ವಾಮನ ಕುಮಾರ್ ಅವರ ಅಗಲುವಿಕೆ ಇಡೀ ಯಕ್ಷ ಪ್ರೇಮಿಗಳಲ್ಲಿ ದಿಗ್ಬ್ರಮೆ ಮೂಡಿಸಿದೆ. ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿದ್ದು,ಅತ್ಯಂತ ಜನಪ್ರಿಯರಾಗಿರುವ ಸಹೃದಯಿ, ನಿಗರ್ವಿ ಕಲಾವಿದರಾಗಿದ್ದ ಅವರು, ಪುಂಡು ವೇಷ ಮತ್ತು ಸ್ತ್ರೀ ವೇಷಗಳೆರಡರಲ್ಲೂ ಎತ್ತಿದ ಕೈ. ಚುರುಕಾದ ನಾಟ್ಯ, ಆಪ್ತ ಮಾತುಗಾರಿಕೆಯಿಂದ ಮತ್ತು ದುಂಡು ಮುಖದೊಂದಿಗೆ ಯಕ್ಷಗಾನಕ್ಕೊಪ್ಪುವ ರೂಪದಿಂದ ಜನಾನುರಾಗಿ ಕಲಾವಿದ ಇತ್ತೀಚೆಗೆ ಹಿರಿಯಡ್ಕ ಮೇಳದ ವ್ಯವಸ್ಥಾಪಕರಾಗಿ ಮೇಳವನ್ನು ಮುನ್ನಡೆಸುತ್ತಿದ್ದರು.ಇವರು ಪತ್ನಿ,ಇಬ್ಬರು ಪುಟ್ಟ ಮಕ್ಕಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.