ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ

ಶೇರ್ ಮಾಡಿ

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ಶಿಕ್ಷಣ) ಬೆಂಗಳೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅನುಮತಿಯೊಂದಿಗೆ ಉಡುಪಿ, ಮಂಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗದ ಪದವಿಪೂರ್ವ ಕಾಲೇಜುಗಳ ಎನ್ ಎಸ್ ಎಸ್ ಯೋಜನಾಧಿಕಾರಿಗಳಿಗೆ “ಸಾರ್ವಜನಿಕ ಹಣಕಾಸು ನಿರ್ವಹಣೆ” ಯ ಬಗ್ಗೆ ಒಂದು ದಿನದ ತರಬೇತಿಯನ್ನು ಉಡುಪಿಯ ಬಂಟಕಲ್ ನ ಶ್ರೀ ಮಾದ್ವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ಶಿಕ್ಷಣ) ಉಡುಪಿ ಜಿಲ್ಲೆಯ ಮಾನ್ಯ ಉಪನಿರ್ದೇಶಕರು ತರಬೇತಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಹಣಕಾಸು ನಿರ್ವಹಣೆ ಎಂಬುದು ಪಾರದರ್ಶಕವಾಗಿದ್ದು ಭಾರತದಲ್ಲಿ ಉತ್ತಮ ಹಣಕಾಸು ವ್ಯವಸ್ಥೆಗೆ ನಾಂದಿ ಹಾಡಿದೆ. ಸರಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ನಡೆಸಲು ಇರುವ ಮಾರ್ಗಸೂಚಿಯನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ಅಗತ್ಯತೆ ಎಂದರು.

ಶ್ರೀ ಮಾಧ್ವ ಕಾಲೇಜೀನ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪದವಿಪೂರ್ವ ಇಲಾಖೆಯ ಮಂಗಳೂರು ವಿಭಾಗದ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಕಂಪ್ಯೂಟರ್ ಮೂಲಕ ನೀಡುವ ಈ ತರಬೇತಿಯನ್ನು ತಮ್ಮ ಕಾಲೇಜಿನಲ್ಲಿ ಆಯೋಜಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಇದರಿಂದ ಹಲವು ಜಿಲ್ಲೆಗಳ ಕಾರ್ಯಕ್ರಮಾಧಿಕಾರಿಗಳಿಗೆ ತಮ್ಮ ಕಾಲೇಜು ಸಂಕೀರ್ಣದ ಮಾಹಿತಿ ಪಸರಿಸಿದಂತಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಭಾಗದ ವಿಭಾಗಾಧಿಕಾರಿಯಾದ ಶ್ರೀಮತಿ ಸವಿತಾ ಎರ್ಮಾಳ್ “ಪಿ ಎಫ್ ಎಂ ಎಸ್ ತರಬೇತಿ” ಪ್ರತೀ ಎನ್ ಎಸ್ ಎಸ್ ಅಧಿಕಾರಿಗೆ ಅತೀ ಅಗತ್ಯ ಎಂದರು. ಹೆಚ್ಚಿನ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾಗ್ಯೂ ದಾಖಲೀಕರಣ ಮತ್ತು ಅನುದಾನದ ನಿರ್ವಹಣೆಯಲ್ಲಿ ಸಮಸ್ಯೆಗಳಾಗುತ್ತಿದ್ದು, ಅದನ್ನು ಪರಿಹರಿಸಲು ಪ್ರತೀ ಕಾರ್ಯಕ್ರಮಾಧಿಕಾರಿಗಳೂ ಈ ತರಬೇತಿಯನ್ನು ಆಸಕ್ತಿಯಿಂದ ಪಡೆದು ತಮ್ಮ ಸಂದೇಹ ಪರಿಹರಿಸಿಕೊಳ್ಳಬೇಕೆಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಂಡ್ಯದ ಪಿ ಇ ಎಸ್ ಕಾಲೇಜಿನ ಉಪನ್ಯಾಸಕರಾದ ಕ್ಯಾತೇಗೌಡ, ಮುಂಡಾಜೆಯ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪುರುಷೋತ್ತಮ ಶೆಟ್ಟಿ ಮತ್ತು ಪದುವ ಪದವಿಪೂರ್ವ ಕಾಲೇಜು ನಂತೂರು ಇಲ್ಲಿನ ಉಪನ್ಯಾಸಕರಾದ ಯತಿರಾಜ್ ಆಗಮಿಸಿದ್ದು ಇವರನ್ನು ಸನ್ಮಾನಿಸಲಾಯಿತು.
ಈ ವರ್ಷ ಹರಿಯಾಣದ ಕೈತಲ್ ನಲ್ಲಿ ಆಯೋಜನೆಯಾಗಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡು ಚಿನ್ನದ ಪದಕಗಳನ್ನು ಪಡೆದು ಮಂಗಳೂರು ವಿಭಾಗಕ್ಕೆ ಕೀರ್ತಿ ತಂದ ಗೋವಿಂದ ದಾಸ ಪದವಿಪೂರ್ವ ಕಾಲೇಜು ಸುರತ್ಕಲ್ ಇಲ್ಲಿನ ಎನ್ ಎಸ್ ಎಸ್ ಸ್ವಯಂಸೇವಕರಾದ ಅನನ್ಯ ಮತ್ತು ಚಿನ್ಮಯಿ ಇವರನ್ನು ಸನ್ಮಾನಿಸಲಾಯಿತು.


ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಮಾರುತಿ ಇವರನ್ನು, ತರಬೇತಿಗೆ ಸ್ಥಳಾವಕಾಶ ನೀಡಿದ ಶ್ರೀ ಮಾಧ್ವ ಇಂಜಿನಿಯರಿಂಗ್ ಕಾಲೇಜ್ ಬಂಟಕಲ್ ಇಲ್ಲಿನ ಪ್ರಾಂಶುಪಾಲರನ್ನು, ಕಾರ್ಯಕ್ರಮದ ಆಯೋಜನೆಗೆ ಎನ್ ಎಸ್ ಎಸ್ ಸ್ವಯಂಸೇವಕರ ಮೂಲಕ ಸಹಕರಿಸಿದ ಮಾಧ್ವ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ನಾಗರಾಜ ರಾವ್ ಇವರನ್ನು ಎನ್ ಎಸ್ ಎಸ್ ಕೋಶ ಮಂಗಳೂರು ವಿಭಾಗದ ವತಿಯಿಂದ ಗೌರವಿಸಲಾಯಿತು.

ಸುಮಾರು ಎಂಬತ್ತಕ್ಕೂ ಹೆಚ್ಚು ಕಾರ್ಯಕ್ರಮಾಧಿಕಾರಿಗಳು ಪಾಲ್ಗೊಂಡ ಈ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬರೂ ಕಂಪ್ಯೂಟರ್ ಬಳಸಿ ಪ್ರಾಯೋಗಿಕವಾಗಿ ಪಿ ಎಫ್ ಎಂ ಎಸ್ ಬಗ್ಗೆ ತಿಳುವಳಿಕೆ ಪಡೆದರು.
ಎನ್ ಎಸ್ ಎಸ್ ಸ್ವಯಂಸೇವಕಿ ಕು.ಹಿತಾಶ್ರೀ ಪ್ರಾರ್ಥಿಸಿದರು. ಅದಮಾರು ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕರಾದ ಜಯಶಂಕರ್ ಸ್ವಾಗತಿಸಿದರು. ಇನ್ನಂಜೆ ಎಸ್ ವಿ ಎಚ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪುಂಡರೀಕಾಕ್ಷ ಕೊಡಂಚ ವಂದಿಸಿದರು.

Leave a Reply

error: Content is protected !!