ಮಣಿಪುರದಲ್ಲಿ ಶುಕ್ರವಾರ ಶಸ್ತ್ರಸಜ್ಜಿತ ಸ್ಥಳೀಯರು ಮತ್ತು ಭದ್ರತಾ ಪಡೆಗಳ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ತೆಂಗ್ನೌಪಾಲ್ ಜಿಲ್ಲೆಯ ಪಲ್ಲೆಲ್ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳಗ್ಗೆ 6 ಗಂಟೆಗೆ ಗುಂಡಿನ ದಾಳಿ ಪ್ರಾರಂಭವಾಗಿದ್ದು, ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಆರ್‌ಎಎಫ್, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರನ್ನು ಒಳಗೊಂಡ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಶೆಲ್‍ಗಳನ್ನು ಹಾರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ತೌಬಲ್ ಮತ್ತು ಕಾಕ್ಚಿಂಗ್ ಜಿಲ್ಲೆ ಅಪುನ್ಬಾ ಲುಪ್ ರಾಜ್ಯಾದ್ಯಂತ ಬಂದ್ ಘೋಷಿಸಿದ ದಿನವೇ ಗುಂಡಿನ ದಾಳಿ ನಡೆದಿದೆ.