ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.15 ರಂದು ಸಂಘದ ಅಧ್ಯಕ್ಷರಾದ ಶ್ರೀಮತಿ ಶ್ವೇತಾಎಚ್ ಕೆ ಇವರ ಅಧ್ಯಕ್ಷತೆಯಲ್ಲಿಜರಗಿತು. ಸಂಘವು 2022 – 23ನೇ ಸಾಲಿನಲ್ಲಿ ಒಟ್ಟು 2,48,758 ಲೀಟರ್ ಹಾಲನ್ನು ಸಂಗ್ರಹಿಸಿದ್ದು ಒಟ್ಟು 2.43 ಲಕ್ಷ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ.
ಸಂಘದ ಅಧ್ಯಕ್ಷರಾದ ಶ್ವೇತಾ ಎಚ್ ಕೆ ಮಾತನಾಡಿ ಸಂಘವು ಈ ಸಾಲಿನಲ್ಲಿ ಸ್ವಂತ ನಿವೇಶನವನ್ನು ಖರೀದಿಸಿದ್ದು ಸಂಘದ ಸದಸ್ಯರ ಅನುಮತಿಯೊಂದಿಗೆ ಈ ಸಾಲಿನ ಲಾಭಾಂಶ ಮತ್ತು ಡಿವಿಡೆಂಡನ್ನು ನೂತನ ಕಟ್ಟಡದ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದರು, ಹಾಗೂ ಇನ್ನೂ ಹೆಚ್ಚಿನ ಸಹಕಾರವನ್ನು ಕೋರಿದರು. ಈ ಸಂದರ್ಭದಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಪ್ರತಿಜ್ಞೆಯನ್ನು ಸರ್ವ ಸದಸ್ಯರು ಸ್ವೀಕರಿಸಿದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯವರಾದ ರಾಜೇಶ್ ಕಾಮತ್ ಮಾತನಾಡಿ ಒಕ್ಕೂಟದಿಂದ ಸದಸ್ಯರಿಗೆ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪಶು ವೈದ್ಯಾಧಿಕಾರಿಗಳಾದ ಡಾ.ಜಿತೇಂದ್ರ ಮಾತನಾಡಿ ಹೈನುಗಾರಿಕೆಯಲ್ಲಿ ಬಳಸಬೇಕಾದ ರೋಗನಿರೋಧಕ ಲಸಿಕೆಗಳು, ಸರಳ ಔಷಧಗಳು ಹಾಗೂ ಪಶು ಆಹಾರದ ಬಗೆಗಿನ ಮಾಹಿತಿಯನ್ನು ನೀಡಿದರು.
ನಿವೃತ್ತ ಶಿಕ್ಷಕರಾದ ಕುಂಞಪ್ಪ ಗೌಡ ಕೊಲ್ಲಾಜೆಪಳಿಕೆ 10,000 ರೂಗಳನ್ನು, ರಾಮಣ್ಣಗೌಡ ಕೇಚೋಡಿ ಹಾಗೂ ಜಯಂತ ಗೌಡ ಅಡೀಲು ಇವರು ತಲಾ 5,000ಗಳನ್ನು ಕಟ್ಟಡದ ನಿರ್ಮಾಣಕ್ಕಾಗಿ ದೇಣಿಗೆಯನ್ನು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ವರದಿ ಸಾಲಿನಲ್ಲಿ ಅತ್ಯಂತ ಹೆಚ್ಚಿನ ಹಾಲು ಪೂರೈಸಿದ ಹಾಗೂ ವರ್ಷಪೂರ್ತಿ ಹಾಲು ಪೂರೈಸಿದ ಸದಸ್ಯರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗು ಪಿಯುಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧನೆಗೈದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ವರದಿ ವಾಚಿಸಿದರು. ಶ್ರೀಮತಿ ದಿವ್ಯ ಪ್ರಾರ್ಥಿಸಿದರು. ಶ್ರೀಮತಿ ಸುಂದರಿ ಸ್ವಾಗತಿಸಿದರು. ಶ್ರೀಮತಿ ಹೇಮಾವತಿ ವಂದಿಸಿದರು. ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದು ಹಾಲು ಪರೀಕ್ಷಕಿ ಶ್ರೀಮತಿ ವೇದಾವತಿ ಸಹಕರಿಸಿದರು.