ವಾಣಿಜ್ಯನಗರಿ ಹುಬ್ಬಳ್ಳಿಯ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ.
ಬೆಂಗಳೂರಿನ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದಿಂದ ಸೆಪ್ಟೆಂಬರ್ 18 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ 5.7 ಅಡಿ ಎತ್ತರವಿದ್ದು, ಸುಮಾರು 150 ಕೆಜಿ ತೂಕ ಹೊಂದಿದೆ. ಮುಖವೊಂದನ್ನು ಬಿಟ್ಟು ಇನ್ನುಳಿದ ಎಲ್ಲ ಭಾಗವೂ ಸಹ ಅಮೆರಿಕನ್ ಡೈಮಂಡ್ ಹರಳು, ನವರತ್ನ ಹರಳುಗಳಿಂದ ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಯುವಕರ ಸಂಘ ಅಮೆರಿಕನ್ ಡೈಮಂಡ್ ಹರಳುಗಳಿಂದ ಅಲಂಕೃತ ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಿಕೊಂಡು ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪನೆ ಮಾಡಿ 7 ದಿನಗಳವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ.
ಅದೇ ರೀತಿ ಈ ವರ್ಷವೂ ಸಹ ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್ ಹಾಗೂ ನವರತ್ನ ಹರಳುಗಳಿಂದ ಐಶ್ವರ್ಯ ಗಣೇಶ ಮಾದರಿಯಲ್ಲಿ ಗಣೇಶ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ.