ಸಿದ್ದರಾಮಯ್ಯಗೆ ಮುಳುವಾಗುತ್ತಾ ಪುತ್ರನ ಆ ಹೇಳಿಕೆ? ಅಷ್ಟಕ್ಕೂ ಯತೀಂದ್ರ ಹೇಳಿದ್ದೇನು?

ಶೇರ್ ಮಾಡಿ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಕ್ಕರ್, ಇಸ್ತ್ರಿಪೆಟ್ಟಿಗೆ ಹಂಚಿದ್ದರಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ ಎಂಬ ಅವರ ಪುತ್ರ ಯತೀಂದ್ರ ಹೇಳಿಕೆ ಇದೀಗ ಭಾರೀ ವೈರಲ್ ಆಗಿದೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುತ್ತು ತರುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಯಾಕಂದ್ರೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

ಮತದಾರರಿಗೆ ಆಮಿಷವೊಡಿದ್ದನ್ನು ಸಮಾರಂಭವೊಂದರಲ್ಲಿ ಖುದ್ದು ಸಿಎಂ‌ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ. ಇದರ ಬೆನ್ನಲ್ಲೇ ಅಲರ್ಟ್ ಆದ ಬಿಜೆಪಿ ನಾಯಕರು, ಈ ಹೇಳಿಕೆ ಆಧರಿಸಿಯೇ ಚುನಾವಣಾ ಆಯೋಗಕ್ಕೆ ದೂರು ಕೊಡಲು ಸಜ್ಜಾಗಿದ್ದಾರೆ. ಚುನಾವಣಾ ವೇಳೆ ಮತದಾರರಿಗೆ ಹಣ, ಮದ್ಯ, ಉಡುಗೊರೆ ನೀಡುವಂತಿಲ್ಲ. ಒಂದು ವೇಳೆ ಉಡುಗೊರೆ ನೀಡಿದ್ದೇ ನಿಜವಾದರೆ ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಬಹುದು. ಈ ಹಿನ್ನೆಲೆಯಲ್ಲಿ ಬಿಜೆಪಿ ದೂರು ನೀಡಲು ಮುಂದಾಗಿದೆ. ಇದಕ್ಕೆ ಬೇಕಾದ ದಾಖಲೆಗಳುನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದಬಂದಿದೆ.

ಅಷ್ಟಕ್ಕೂ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಬೇಕೆಂದು, ಸಾವಿರಾರು ಜನರನ್ನು ಸೇರಿಸಿ ಅವರೆಲ್ಲರಿಗೂ ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ನೀಡಲಾಗಿತ್ತು. ಆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಅವುಗಳನ್ನು ಕೊಡಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಂಜನಗೂಡಿನಲ್ಲಿ ಶುಕ್ರವಾರ ನಡೆದ ‌ತಾಲ್ಲೂಕು ಮಡಿವಾಳರ ಸಮುದಾಯ ಭವನದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ನೀಡಿರುವ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ
ಇನ್ನು ತಮ್ಮ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಯತೀಂದ್ರ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ನಡೆದ ಜಿಲ್ಲಾ ಸಮಾವೇಶದ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಪದಾಧಿಕಾರಿಗಳು ಉಡುಗೊರೆಗಳನ್ನು ವಿತರಿಸಿದ್ದಾರೆ. ಪಕ್ಷದಿಂದ ಅಥವಾ ನಮ್ಮ ಕಡೆಯಿಂದ ನೀಡಿಲ್ಲ, ಈ ವೇಳೆ ನಮ್ಮ ತಂದೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ನನಗೆ ಸಾಧ್ಯವಾಗದ ಕಾರಣ ನನ್ನ ತಂದೆ ಸಮಾವೇಶಕ್ಕೆ ಹಾಜರಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಯತೀಂದ್ರ ಅವರ ಹೇಳಿಕೆಯನ್ನು ಚುನಾವಣಾ ಆಯೋಗ ಗಮನಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಅರ್ಜಿ ವಿಚಾರಣೆ ಬಾಕಿ ಇದೆ. ಯತೀಂದ್ರ ಅವರ ಹೇಳಿಕೆಯನ್ನು ಸಾಬೀತುಪಡಿಸಲು ಪುರಾವೆಗಳಿದ್ದರೆ, ಇಸಿಐ ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಉಚಿತ ವಿತರಣೆಯು ಗಂಭೀರ ಅಪರಾಧವಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಹಾಗಾದ್ರೆ, ಮಗ ಬಾಯಿತಪ್ಪಿ ಆಡಿದ ಮಾತು ಸಿದ್ದರಾಮಯ್ಯಗೆ ಸಮಸ್ಯೆಯಾಗುತ್ತಾ? ಸಿಎಂಗೆ ಮುಳುವಾಗುತ್ತಾ ಮಗನ ಹೇಳಿಕೆ? ಎನ್ನುವುದನ್ನು ಕಾದುನೋಡಬೇಕಿದೆ.

Leave a Reply

error: Content is protected !!