ಕಡಬ ತಾಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಡಬ ತಾಲೂಕು ಮಟ್ಟದ ಪದವಿಪೂರ್ವ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸರಕಾರಿ ಪ್ರೌಢಶಾಲೆ ವಳಾಲು ದೈಹಿಕ ಶಿಕ್ಷಣ ನಿರ್ದೇಶಕರಾದ ಚಕ್ರಪಾಣಿ ಎವಿ ಇವರು ಮಾತನಾಡುತ್ತಾ “ಕ್ರೀಡೆಯು ವಿದ್ಯಾರ್ಥಿಯ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕ್ರೀಡೆಯು ಪ್ರೋತ್ಸಾಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಖೋ ಖೋ ಪಂದ್ಯಾಟವು ವಿದ್ಯಾರ್ಥಿಗಳು ಸದಾ ಕಾರ್ಯಪ್ರವೃತರಾಗುವಂತೆ ಮಾಡುತ್ತದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲರಿಗೂ ಶುಭವಾಗಲಿ” ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸರಕಾರಿ ಪ್ರೌಢಶಾಲೆ ಪಡುಬೆಟ್ಟು ಇದರ ಮುಖ್ಯ ಗುರುಗಳಾದ ಶ್ರೀಮತಿ ಕಮಲ ಇವರು ಮಾತನಾಡುತ್ತಾ “ಸೋಲು ಮತ್ತು ಗೆಲುವು ಒಂದು ಪಂದ್ಯಾಟದಲ್ಲಿ ಸಹಜ. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ ಸದಾ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುವಂಥದ್ದು ಒಬ್ಬ ಕ್ರೀಡಾಪಟುವಿನ ಶ್ರೇಷ್ಠವಾದ ಗುಣ. ಇಲ್ಲಿ ಭಾಗವಹಿಸಲಿರುವ ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನ ಸಿಗದೇ ಇರಬಹುದು. ಆದರೆ ಮುಂದೊಂದು ದಿನ ಯಶಸ್ಸು ಖಂಡಿತವಾಗಿ ಸಿಗುತ್ತದೆ. ನಿರಂತರವಾದ ಪ್ರಯತ್ನ ನಿಮ್ಮೆಲ್ಲರಲ್ಲಿ ಇರಲಿ” ಎಂದು ಸಂದೇಶವನ್ನು ನೀಡಿದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿಯಸ್ಕರಿಯ ಎಂ.ಎ ಶುಭ ಹಾರೈಸಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಪಿಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಗಣೇಶ್ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರಾದಚೇತನ್ ಎಂ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ರಾಮಣ್ಣ, ಶ್ರೀ ರಾಘವ, ಪ್ರದೀಪ್, ವಿನಯ್ ಕುಮಾರ್, ಶ್ರೀಮತಿ ಪ್ರಫುಲ್ಲ ಖೋ ಖೋ ಪಂದ್ಯಾವಳಿಯನ್ನು ನಡೆಸಿಕೊಟ್ಟರು. ಅಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಆತೂರು ಶಾಖೆಯ ಪ್ರಬಂಧಕರಾದ ಆನಂದ ಗೌಡ ಪಜ್ಜಡ್ಕ ಇವರು ಬಹುಮಾನ ವಿತರಿಸಿದರು.

ಹುಡುಗರ ವಿಭಾಗದಲ್ಲಿ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ಶ್ರೀ ಸುಬ್ರಹ್ಮಣ್ಯ ಪಿಯು ಕಾಲೇಜಿನ ತಂಡವು ದ್ವಿತೀಯ ಸ್ಥಾನವನ ಗಳಿಸಿತು. ಉತ್ತಮ ಓಟಗಾರನಾಗಿ ಚಂದನ್, ಉತ್ತಮ ಹಿಡಿತಗಾರನಾಗಿ ಆಶ್ಲೇಶ್, ಸರ್ವಾಂಗೀಣ ಆಟಗಾರನಾಗಿ ನಿಶಾಂತ್ ಮೂಡಿ ಬಂದರು.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೆಥನಿ ಪಿಯು ಕಾಲೇಜು ನೂಜಿಬಾಲ್ತಿಲದ ವಿದ್ಯಾರ್ಥಿನಿಯರು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪಡೆದುಕೊಂಡರು. ಉತ್ತಮ ಹಿಡಿತಗಾರ್ತಿಯಾಗಿ ಆಶಿತಾ, ಉತ್ತಮ ಓಟಗಾರ್ತಿಯಾಗಿ ಮೋಹಿನಿ, ಸರ್ವಾಂಗೀಣ ಆಟಗಾರ್ತಿಯಾಗಿ ಲಿಖಿತ ಮೂಡಿಬಂದರು.

Leave a Reply

error: Content is protected !!