ಪೋಷಕರು ಡಾನ್ಸ್ ಕ್ಲಾಸ್‌ಗೆ ಹೋಗಬೇಡ ಎಂದಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿನ್ನಕೋಟೆ ಗ್ರಾಮದ ಕೀರ್ತನಾ (18) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಇತ್ತೀಚೆಗೆ ಡಾನ್ಸ್‌ಗೆ ಹೋಗಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಾರೆ. ಈ ಹಿನ್ನೆಲೆ ಕೀರ್ತನಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡಾನ್ಸ್ ಎಂದರೆ ತುಂಬಾ ಇಷ್ಟಪಡುತ್ತಿದ್ದ ಕೀರ್ತನಾ ಡಾನ್ಸ್ ಕ್ಲಾಸ್‌ಗೆ ಹೋಗಬೇಡ ಎಂದು ಹೇಳಿದ ಪೋಷಕರ ಮಾತಿನಿಂದ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.