ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ ನೀಡಿದ ಭಾರತ

ಶೇರ್ ಮಾಡಿ

ಬಾಬರ್ ಅಝಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ 2023 ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತಕ್ಕೆ ಬಂದಿಳಿದಿದೆ. ಇದು ಪಾಕಿಸ್ತಾನ ಕ್ರಿಕೆಟ್ ತಂಡವು 7 ವರ್ಷಗಳ ನಂತರ ಭಾರತಕ್ಕೆ ಮೊದಲ ಭೇಟಿಯಾಗಿದೆ. ಮೆನ್ ಇನ್ ಗ್ರೀನ್ ಬುಧವಾರ ರಾತ್ರಿ 8 ಗಂಟೆಗೆ ಹೈದರಾಬಾದ್‌ಗೆ ವಿಮಾನದ ಮೂಲಕ ತಲುಪಿದರು. ನಾಯಕ ಬಾಬರ್ ಅಝಮ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. ಪಾಕಿಸ್ತಾನವು ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ನೆದರ್​ಲೆಂಡ್ಸ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಕದನ ಅಕ್ಟೋಬರ್ 14 ರಂದು ಅಹ್ಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 10 ರಂದು ಶ್ರೀಲಂಕಾ ವಿರುದ್ಧ ಬಾಬರ್ ಪಡೆ ಹೈದರಾಬಾದ್‌ನಲ್ಲಿ ಮತ್ತೊಂದು ಪಂದ್ಯವನ್ನು ಆಡಲಿದ್ದಾರೆ.

ಇನ್ನು ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವುದಾಗಿ ಬಿಸಿಸಿಐ ಭರವಸೆ ನೀಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ ಮುಖ್ಯಸ್ಥ ಝಕಾ ಅಶ್ರಫ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಎಲ್ಲ ತಂಡಗಳಿಗೆ ಉತ್ತಮ ಭದ್ರತೆಯನ್ನು ಒದಗಿಸಲಾಗುವುದು ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗುವುದು ಎಂದು ಬಿಸಿಸಿಐ ಐಸಿಸಿಗೆ ಭರವಸೆ ನೀಡಿದೆ. ಹಾಗಾಗಿ ನಮ್ಮ ತಂಡಕ್ಕೆ ನಾನು ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ನಮ್ಮ ತಂಡವು ಭಾರತದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದು ಪಿಸಿಬಿ ಮುಖ್ಯಸ್ಥರು ತಂಡದ ನಿರ್ಗಮನದ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕೊನೆಯ ಬಾರಿಗೆ ಏಷ್ಯಾಕಪ್‌ನಲ್ಲಿ ಕಾಣಿಸಿಕೊಂಡಿತ್ತು. ಕಾಂಟಿನೆಂಟಲ್ ಕಪ್‌ನಲ್ಲಿ ಬಾಬರ್ ಅಝಮ್ ನೇತೃತ್ವದ ತಂಡವು ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಇದೀಗ ಏಕದಿನ ವಿಶ್ವಕಪ್​ನಲ್ಲಿ ನೆದರ್ಲೆಂಡ್ಸ್ ವಿರದ್ಧ ಮೊದಲ ಪಂದ್ಯ ಆಡುವ ಮೊದಲು, ಪಾಕಿಸ್ತಾನವು ಎರಡು ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಅಕ್ಟೋಬರ್ 5 ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ. ಆದರೆ, ಟೂರ್ನಿಯ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29ರಂದು ಆರಂಭವಾಗಲಿದ್ದು, ಸೆ.29ರಂದು ಹೈದರಾಬಾದ್‌ನಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಆದರೆ, ಭದ್ರತಾ ಕಾರಣಗಳಿಗಾಗಿ ಆಟವು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಪ್ರವೇಶ ಇರುವುದಿಲ್ಲ.

ಪಾಕಿಸ್ತಾನ ವಿಶ್ವಕಪ್ ತಂಡ: ಬಾಬರ್ ಅಝಮ್ (ನಾಯಕ), ಶಾದಾಬ್ ಖಾನ್, ಮುಹಮ್ಮದ್ ರಿಜ್ವಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಮುಹಮ್ಮದ್ ನವಾಜ್, ಮುಹಮ್ಮದ್ ವಾಸಿಂ ಜೂನಿಯರ್, ಅಘಾ ಸಲ್ಮಾನ್, ಶಾಹೀನ್ ಶಾ ಅಫ್ರಿದಿ, ಒಸಾಮಾ ಮಿರ್.

Leave a Reply

error: Content is protected !!