ರಾಜ್ಯದ ಪುಣ್ಯ ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆ ಹೊಂಡಮಯ..!!

ಶೇರ್ ಮಾಡಿ

ರಾಜ್ಯದ ಪ್ರಸಿದ್ಧ ಯಾತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸುವ ಪೆರಿಯಶಾಂತಿ-ಕೊಕ್ಕಡ-ನಿಡ್ಲೆ-ಕುದ್ರಾಯ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು ಭಕ್ತಾದಿಗಳು, ನಿತ್ಯ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯವೂ ತ್ರಾಸದಾಯಕವಾಗಿ ಪ್ರಯಾಣಿಸುವಂತಾಗಿದೆ.

ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತಾದಿಗಳು ರಾಜ್ಯದ ಶ್ರೀಮಂತ ದೇವಾಲಯವೆಂದ ಎನಿಸಿಕೊಂಡ ಶ್ರೀ ಕ್ಷೇತ್ರ ಸುಬ್ರಹ್ಮಣ್ಯವನ್ನು ತಲುಪಬೇಕಾದರೆ ಇದೇ ಹೊಂಡ ಮಯ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿದೆ.

ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಪ್ರತಿಷ್ಠಿತ ನಾಯಕರು ಆಗಮಿಸುವ ಸಂದರ್ಭದಲ್ಲಿ ಹಾಗೂ ಧರ್ಮಸ್ಥಳ ಲಕ್ಷದೀಪ ಸೇರಿದಂತೆ ಅನೇಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಇಲ್ಲಿನ ಹೊಂಡಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟು ಸಂಚಾರ ಯೋಗ್ಯವಾಗಿರುತ್ತವೆ. ಉಳಿದ ಸಂದರ್ಭಗಳಲ್ಲಿ ಮಾತ್ರ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ರಸ್ತೆಗಳು ಹೊಂಡಮಯವಾಗಿರುವುದು ಕಾಣುವುದಿಲ್ಲ. ಉಳಿದ ಸಮಯದಲ್ಲಿ ಈ ರೀತಿಯ ತಾತ್ಸಾರ ಏಕೆ ಎಂದು ಜನಸಾಮಾನ್ಯರ ನಡುವೆ ಚರ್ಚೆಯಾಗುತ್ತಿದೆ.

ದಿನನಿತ್ಯ ರಿಕ್ಷಾ, ಜೀಪು ಬಾಡಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿನ ವಾಹನ ಸವಾರರು ತಮಗೆ ಬಂದ ಬಾಡಿಗೆ ಹಣವನ್ನು ವಾಹನ ದುರಸ್ತಿಗಾಗಿಯೇ ಮೀಸಲಿಡುವ ಪರಿಸ್ಥಿತಿ ಬಂದಿದ್ದು, ಯಾರೂ ಕೂಡ ಈ ರಸ್ತೆಯ ದುರಸ್ತಿಗೆ ಮನ ಮಾಡದಿರುವುದು ಇಲ್ಲಿನ ಸಂಚಾರಿಗಳಿಗೆ‌ ಶಾಪವಾಗಿ ಕಾಡಲಾರಂಭಿಸಿದೆ.

ಒಂದು ಸಣ್ಣ ಮಳೆಗೂ ಹೊಂಡದ ತುಂಬೆಲ್ಲ ನೀರು ತುಂಬಿಕೊಳ್ಳುತ್ತಿದ್ದು, ಹೊಂಡದ ಆಳ ವಾಹನ ಸವಾರರಿಗೆ ಊಹಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯ ವ್ಯವಸ್ಥೆಯು ಕೂಡ ಸಮರ್ಪಕವಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು ಬೇರೆ ಬೇರೆ ಊರಿನಿಂದ ಬರುತ್ತಿರುವ ಯಾತ್ರಾರ್ಥಿಗಳಿಗೆ ಭಯದ ಪರಿಸ್ಥಿತಿ ತಂದ್ದೊಡ್ಡಿದೆ.

ಈ ಹಿಂದೆ ರಾಜ್ಯ ಹೆದ್ದಾರಿ 37 ಆಗಿದ್ದ ಈ ರಸ್ತೆಯು ಕಳೆದ ನಾಲ್ಕು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 73ರ ಸ್ಪರ್ ರಸ್ತೆಯಾಗಿ ಪರಿವರ್ತನೆಗೊಂಡಿತು. ಈ ರಸ್ತೆಯು ರಕ್ಷಿತಾರಣ್ಯದ ಮಧ್ಯ ಹಾದುಹೋಗಿರುವ ಕಾರಣ ಅರಣ್ಯ ಇಲಾಖೆಯೊಂದಿಗೆ ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲಷ್ಟೇ ರಸ್ತೆ ವಿಸ್ತರಣೆ ಹಾಗೂ ನೂತನ ರಸ್ತೆಯಾಗಿ ಬದಲಾಗಲು ಸಾಧ್ಯ.

Leave a Reply

error: Content is protected !!
%d