‘ಅಲೆ ಬುಡ್ಯೆರ್ ಎಂಬ ಘೋಷಣೆಯೊಂದಿಗೆ ಕರೆಯಲ್ಲಿ ಜೋಡಿ ಕೋಣಗಳ ವೀರೋಚಿತ ಓಟ, ಜತೆಗೆ ಹಗ್ಗ- ನೇಗಿಲು ಹಿಡಿದು ಓಡುವ ಓಟಗಾರ, ಕೋಣ ಗೆದ್ದ ಖುಷಿಯಲ್ಲಿ ಮೀಸೆ ತಿರುವುತ್ತಾ ಗತ್ತಿನ ಹೆಜ್ಜೆ ಹಾಕುವ ಯಜಮಾನರು, ಸ್ಟಾರ್ ಕೋಣಗಳ ಹಿಂದೆ ಅಭಿಮಾನಿಗಳ, ದಂಡು, ಪ್ರೇಕ್ಷಕರ ದಂಡು ಇದುವರೆಗೆ ಕರಾವಳಿಗೆ ಸೀಮಿತವಾಗಿದ್ದ ಕಂಬಳ ಕೂಟದ ಈ ದೃಶ್ಯಗಳು ಇದೀಗ ರಾಜಧಾನಿ ಬೆಂಗಳೂರಿಗೂ ಪರಿಚಯವಾಗುತ್ತಿದೆ. ನವೆಂಬರ್ ತಿಂಗಳ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರಾವಳಿಯ ಶ್ರೀಮಂತ ಸಂಸ್ಕೃತಿಯ ಅನಾವರಣವಾಗಲಿದೆ.
ಬೆಂಗಳೂರು ಕಂಬಳ ಆಯೋಜನೆಯ ಬಗ್ಗೆ ಮಂಗಳೂರಿನಲ್ಲಿ ಶನಿವಾರ ಕೋಣಗಳ ಯಜಮಾನರು ಮತ್ತು ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು. ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹಲವು ಮಾಹಿತಿ ಹಂಚಿಕೊಂಡರು.
ಬೆಂಗಳೂರು ಕಂಬಳಕ್ಕೆ ಸುಮಾರು 100ರಿಂದ 130ರಷ್ಟು ಜೊತೆ ಕೋಣಗಳು ಭಾಗವಹಿಸಲಿದ್ದು, ಕಂಬಳಕ್ಕೆ ಎರಡು ದಿನಗಳ ಮೊದಲೇ ಕೋಣಗಳು ಬೆಂಗಳೂರಿಗೆ ಬರಲಿದೆ. ಮಂಗಳೂರಿನಿಂದ ರಾಜಧಾನಿಗೆ ಮೆರವಣಿಗೆ ರೂಪದಲ್ಲಿ ಲಾರಿಯಲ್ಲಿ ಕೋಣಗಳು ಸಾಗಲಿದೆ. ಜತೆಗೆ ಪಶು ವೈದ್ಯರು, ಪಶು ಆ್ಯಂಬುಲೆನ್ಸ್ ಗಳು ಸಾಗಲಿದೆ.
ರಾಜಧಾನಿಯಲ್ಲಿ ನಡೆಯಲಿರುವ ಮೊದಲ ಕಂಬಳಕ್ಕೆ ಸಿಎ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು, ರಾಜಕೀಯ ನೇತಾರರು, ಚಿತ್ರರಂಗದ ಗಣ್ಯರು ಆಗಮಿಸಲಿದ್ದಾರೆ. ಕರಾವಳಿ ಕುವರಿ, ಬಾಲಿವುಡ್ ಸ್ಟಾರ್ ಐಶ್ವರ್ಯ ರೈ ಮತ್ತು ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೂ ಆಹ್ವಾನ ನೀಡಲಾಗಿದೆ. ಗುರುಕಿರಣ್, ರಿಷಬ್ ಶೆಟ್ಟಿ, ಅನುಷ್ಕಾ ಶೆಟ್ಟಿ ಬರಲಿದ್ದಾರೆ ಎಂದು ಅಶೋಕ್ ರೈ ಹೇಳಿದರು.
ಬೆಂಗಳೂರಿನ ಕಂಬಳಕ್ಕೆ ಆಗಮಿಸುವ ಪ್ರತಿ ಕೋಣಕ್ಕೂ ಮತ್ತು ಯಜಮಾನರುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಕೋಣಗಳಿಗೆ ಬೇಕಾದ ಕುಡಿಯುವ ನೀರು, ಹುರುಳಿ, ಹುಲ್ಲನ್ನು ಕರಾವಳಿಯಿಂದಲೇ ತೆಗೆದುಕೊಂಡು ಹೋಗಲಾಗುತ್ತದೆ.
ಕರಾವಳಿಯ ಕಂಬಳ ಕರೆಯಂತೆ 145 ಮೀಟರ್ ಉದ್ದದ ಟ್ರ್ಯಾಕ್ ನಲ್ಲಿ ಕಂಬಳ ನಡೆಯಲಿದೆ. ನುರಿತ ತಜ್ಞರೇ ಇದರ ಕೆಲಸ ನಿರ್ವಹಿಸಲಿದ್ದಾರೆ. ಕಂಬಳದ ಕರೆಗಳ ಹೆಸರನ್ನು ಇದುವರೆಗೂ ಅಂತಿಮಗೊಳಿಸಲಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಕಂಬಳ ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿದೆ. ಇದುವರೆಗೆ ವಿಡಿಯೋಗಳಲ್ಲಿ ಕೋಣಗಳ ಓಟ ಕಂಡಿದ್ದ ಬೆಂಗಳೂರಿನ ಜನತೆ ಭಾರೀ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. 7ರಿಂದ 9 ಲಕ್ಷ ಜನ ಸೇರುವ ಅಂದಾಜಿದ್ದು, ಎರಡು ಸಾವಿರದಷ್ಟು ವಿಐಪಿ ವ್ಯವಸ್ಥೆ, 15 ಸಾವಿರ ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತದೆ. ಆರು ಸಾವಿರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.