ಅರಣ್ಯ ಇಲಾಖೆಯಿಂದ ಆನೆ ದಾಳಿಗೆ ಸಂಬಂಧಿಸಿ ಆನೆ ಕಾಡಿಗಟ್ಟುವ ಅನೇಕ ಪ್ರಯತ್ನಗಳ ಮಧ್ಯೆಯೇ ಸೆ.30ರ ಶನಿವಾರ ರಾತ್ರಿ ತಾಲೂಕಿನ ಕಡಿರುದ್ಯಾವರ ಕಾನರ್ಪ ಸಮೀಪ ಗದ್ದೆಗೆ ದಾಳಿಯಿಟ್ಟು ಭತ್ತ ಸರ್ವನಾಶ ಮಾಡಿದೆ.
ಕಾನರ್ಪ ಎರುಬಳ್ಳಿ ಬೊಮ್ಮಣ್ಣ ಗೌಡ ಹಾಗೂ ಬೆದ್ರಡಿ ನಾರಾಯಣ ಗೌಡ ಅವರ ಭತ್ತದ ಕೃಷಿಗೆ ಅನೆಗಳು ನುಗ್ಗಿ ಸುಮಾರು ಮೂರು ಎಕ್ರೆಗೂ ಅಧಿಕ ಸ್ಥಳದಲ್ಲಿ ಹಾನಿ ಮಾಡಿವೆ.
ಒಂದು ವಾರದಿಂದ ಈ ಭಾಗದ ಫಣಿಕಲ್, ಹಿತ್ತಿಲಕೊಡಿ ಪರಿಸರದಲ್ಲಿ ಅನೆಗಳು ನಿರಂತರವಾಗಿ ಕೃಷಿಗೆ ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆ ಮೆಣಸಿನ ಹೊಗೆ ಪ್ರಯೋಗದ ನಡುವೆಯೂ ಆನೆಗಳ ಹಿಂಡು ಊರಿಂದ ಊರಿಗೆ ಸಂಚರಿಸಿ ದಾಳಿ ಪ್ರಮಾಣ ಹೆಚ್ಚಿಸುತ್ತಲೇ ಇವೆ.
ಇದರಿಂದ ಕೃಷಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇಷ್ಟಾದರೂ ಸರಕಾರ ಅಥವಾ ಸಂಬಂಧಪಟ್ಟ ಸಚಿವರು ಗಮನ ಹರಿಸದಿರುವುದು ಕೃಷಿಕರನ್ನು ಆಕ್ರೋಶ ಹುಟ್ಟಿಸುವಂತೆ ಮಾಡಿದೆ.