ದಾಸವಾಳ ಟೀ ಅಥವಾ ‘ಅಗುವಾ ಡಿ ಜಮೈಕಾ’ ಎಂದೂ ಇದನ್ನು ಕರೆಯಲಾಗುತ್ತದೆ. ರುಚಿಕರ ಮಾತ್ರವಲ್ಲದೆ ರಿಫ್ರೆಶಿಂಗ್ ಅನುಭವ ನೀಡುವ ಟೀ ಮೆಕ್ಸಿಕೋದಾದ್ಯಂತ ತುಂಬಾ ಜನಪ್ರಿಯವಾದ ಪಾನೀಯವಾಗಿದೆ. ದಾಸವಾಳ ಟೀ ಮಾಡೋದು ತುಂಬಾ ಸರಳ. ಕೇವಲ 3 ಪದಾರ್ಥಗಳು ಇದನ್ನು ತಯಾರಿಸಲು ಸಾಕಾಗುತ್ತದೆ. ಸಾಕಷ್ಟು ಆರೋಗ್ಯಕರ ಗುಣಗಳುಳ್ಳ ಚಹಾ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ, ಉತ್ತಮ ನಿದ್ರೆಗೂ ಸಹಾಯ ಮಾಡುತ್ತದೆ.
ಬೇಕಾಗುವ ಪದಾರ್ಥಗಳು:
ಒಣ ದಾಸವಾಳ ದಳ – 1 ಕಪ್
ನೀರು – 2 ಕಪ್, 1 ಲೀಟರ್
ಸಕ್ಕರೆ ಪುಡಿ – 1 ಕಪ್
ತಂಪಾದ ನೀರು – 1 ಲೀಟರ್
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ, ಅದರಲ್ಲಿ ಒಣಗಿದ ದಾಸವಾಳ ದಳಗಳನ್ನು ಸೇರಿಸಿ, ಬಿಸಿ ಮಾಡಿ.
* ಕುದಿ ಬಂದ ತಕ್ಷಣ ಉರಿಯನ್ನು ಕಡಿಮೆ ಮಾಡಿ, ಸುಮಾರು 15 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಮತ್ತೊಂದು ಪಾತ್ರೆಯಲ್ಲಿ 1 ಲೀಟರ್ ತಂಪಾದ ನೀರಿಗೆ ಸಕ್ಕರೆ ಪುಡಿ ಹಾಕಿ ಅದು ಕರಗುವತನಕ ಮಿಶ್ರಣ ಮಾಡಿ.
* ದಾಸವಾಳ ಹಾಗೂ ನೀರಿನ ಮಿಶ್ರಣವನ್ನು ಶಾಖದಿಂದ ತೆಗೆದುಹಾಕಿ ಸುಮಾರು 30 ನಿಮಿಷ ತಣ್ಣಗಾಗಲು ಬಿಡಿ.
* 30 ನಿಮಿಷಗಳ ನಂತರ ದಾಸವಾಳದ ದಳಗಳನ್ನು ನೀರಿನಿಂದ ಪ್ರತ್ಯೇಕಿಸಿ.
* ಸಕ್ಕರೆ ಸೇರಿಸಿದ ನೀರಿಗೆ ದಾಸವಾಳದ ದ್ರವವನ್ನು ಸೇರಿಸಿ ಮಿಶ್ರಣ ಮಾಡಿ.
* ಕೊನೆಯಲ್ಲಿ ಐಸ್ ಕ್ಯೂಬ್ ಸೇರಿಸಿ ಗ್ಲಾಸ್‌ಗಳಲ್ಲಿ ಬಡಿಸಿ, ದಾಸವಾಳ ಟೀಯನ್ನು ಆನಂದಿಸಿ.