ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ತಲ್ವಾರ್ ಹಿಡಿದು ಸಾಗಲು ಸರ್ಕಾರ ಅವಕಾಶ ಕೊಡುವುದಾದರೆ, ಮಾರಕಾಸ್ತ್ರ ಹಿಡಿದು ಹಿಂದೂ ಸಮಾಜದ ಮೇಲೆ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ ಹಿಂದು ಸಮಾಜದ ಮುಖಂಡ ಅರುಣ್ಕುಮಾರ್ ಪುತ್ತಿಲ ಪ್ರಶ್ನಿಸಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ಥರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮಲ್ಲೂ ಶಸ್ತ್ರಾಸ್ತ್ರ ಇದೆ. ಅಗತ್ಯ ಬಿದ್ದರೆ ಶಸ್ತ್ರಾಸ್ತ್ರಗಳ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ಧವಿದೆ. ನವರಾತ್ರಿಯ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡುತ್ತೇವೆ. ಪ್ರತಿ ಮನೆಯಲ್ಲೂ ಸ್ಕ್ರೂಡ್ರೈವರ್, ಸ್ಪ್ಯಾನರ್ಗೆ ಪೂಜೆ ಮಾಡದೇ ತಲ್ವಾರ್ಗಳಿಗೆ ಪೂಜೆ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಮುಸ್ಲಿಮರ ಮತಗಳನ್ನು ಪಡೆಯುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಮತಾಂಧತೆಗೆ ಬೆಂಬಲ ನೀಡುತ್ತಿದೆ. ರಾಗಿಗುಡ್ಡದ ಘಟನೆ ಸಹ ಪೂರ್ವ ನಿಯೋಜಿತ ಕೃತ್ಯ. ರಾಗಿಗುಡ್ಡದಲ್ಲಿ ಗಣೇಶೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇದರಿದ ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಅಂತಾ ಈ ಘಟನೆ ನಡೆದಿದೆ. ಪಾಠ ಕಲಿಸಿದ ಶಿಕ್ಷಕರ ಮನೆಗೇ ಮುಸ್ಲಿಂ ವಿದ್ಯಾರ್ಥಿಗಳು ನುಗ್ಗಿ ದಾಂಧಲೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.