ಎನ್ನೆಸ್ಸೆಸ್‌ ಮೂಲಕ ಗ್ರಾಮೀಣ ಜೀವನ ಸಮೀಕ್ಷೆಗೆ ಸರಕಾರ ಸಿದ್ಧತೆ

ಶೇರ್ ಮಾಡಿ

ಅತಿ ಹಿಂದುಳಿದ ಹಳ್ಳಿಗಳ ಜನರ ಜೀವನ ಪರಿವರ್ತನೆಗೆ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌)ಯ ಸ್ವಯಂ ಸೇವಕರ ಮೂಲಕ ಹೊಸ ಸಮೀಕ್ಷೆಗೆ ರಾಜ್ಯ ಸರಕಾರ ಮುಂದಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ರೇಖೆಗಿಂತ ಮೇಲೆ ತರಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ರಾಜ್ಯ ಸರಕಾರ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ರೂಪಿಸುತ್ತಿದ್ದು, ಪದವಿ ಕಾಲೇಜಿನ ಎನ್ನೆಸ್ಸೆಸ್‌ ಘಟಕದಿಂದ ಅನುಷ್ಠಾನ ಮಾಡಲಾಗುತ್ತದೆ. ಪ್ರತೀ ಕಾಲೇಜಿನ ಎನ್ನೆಸ್ಸೆಸ್‌ ಘಟಕಕ್ಕೆ ಈಗಾಗಲೇ ಒಂದೊಂದು ಗ್ರಾಮ/ಹಳ್ಳಿಯನ್ನು ದತ್ತು ಪಡೆಯುವಂತೆ ಸೂಚಿಸಲಾಗಿದೆ. ದತ್ತು ಪಡೆದ ಹಳ್ಳಿಗಳಲ್ಲಿ ಎನ್ನೆಸ್ಸೆಸ್‌ ಸೇವಾ ಕಾರ್ಯವೂ ನಡೆಯುತ್ತಿದೆ.

ಎನ್ನೆಸ್ಸೆಸ್‌ ಸ್ವಯಂಸೇವಕರು ತಮ್ಮ ಘಟಕ ದತ್ತು ಪಡೆದಿರುವ ಅಥವಾ ಸಾಮಾಜಿಕ/ ಆರ್ಥಿಕವಾಗಿ ಹಿಂದುಳಿದ ಹಳ್ಳಿಗಳಿಗೆ ತೆರಳಿ ಜನರ (ವಿಶೇಷವಾಗಿ ಮಕ್ಕಳ) ಪೌಷ್ಟಿಕಾಂಶ, ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಜಾಗೃತಿ, ಪರಿಸರ ಸಂರಕ್ಷಣೆಯ ಜತೆಗೆ ಮನೆ ಮನೆಗೆ ಭೇಟಿ ನೀಡಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಇದೆಯೇ ಎಂಬ ವಿವರದ ಜತೆಗೆ ಶೌಚಾಲಯ ಸಹಿತ ಕನಿಷ್ಠ ಸೌಲಭ್ಯದ ಬಗ್ಗೆಯೂ ಮಾಹಿತಿ ಕಲೆ ಹಾಕಿ ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡಲಿದ್ದಾರೆ. ಸರಕಾರದ ಯೋಜನೆಗಳು ಅರ್ಹ ವ್ಯಕ್ತಿಗೆ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸಮೀಕ್ಷೆಯ ಒಂದು ಭಾಗ.

ಕಾಲೇಜುಗಳಿಗೆ ಸೂಚನೆ
ಈ ಯೋಜನೆಯಲ್ಲಿ ಎಲ್ಲ ಸರಕಾರಿ, ಖಾಸಗಿ, ಅನುದಾನಿತ ಕಾಲೇಜುಗಳ ಎನ್ನೆಸ್ಸೆಸ್‌ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಮೀಕ್ಷೆ ಸಂಪೂರ್ಣ ವಿವರವನ್ನು ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಆಯಾ ಕಾಲೇಜುಗಳಿಗ ಪ್ರಾಂಶುಪಾಲರ ಮೂಲಕ ಎನ್ನೆಸ್ಸೆಸ್‌ ಸಂಯೋಜಕರಿಗೆ ಶೀಘ್ರವೇ ತಲುಪಲಿದೆ.

15 ಸಾವಿರ ಸ್ವಯಂಸೇವಕರು
ರಾಜ್ಯದ 750 ಆಯ್ದ ಹಳ್ಳಿಗಳಲ್ಲಿ ಸಮೀಕ್ಷೆ ನಡೆಯಲಿದ್ದು, 46 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ 64 ಹಾಗೂ ಉಡುಪಿ ಜಿಲ್ಲೆಯಲ್ಲಿ 35 ಎನ್ನೆಸ್ಸೆಸ್‌ ಘಟಕಗಳಿವೆ. ಉಡುಪಿಯಲ್ಲಿ 6 ಸಾವಿರ, ದ.ಕ.ದಲ್ಲಿ 9 ಸಾವಿರ ಸೇರಿದಂತೆ ಉಭಯ ಜಿಲ್ಲೆಯಲ್ಲಿ 15 ಸಾವಿರ ಸ್ವಯಂಸೇವಕರು ಇದ್ದಾರೆ.

ವೆಚ್ಚ ನಿರ್ವಹಣೆ ಕಷ್ಟ
ಸಮೀಕ್ಷೆಗೆ ತಗಲುವ ವೆಚ್ಚ ಮತ್ತು ಸ್ವಯಂಸೇವಕರ ಪ್ರಯಾಣ ವೆಚ್ಚ, ಇತರ ಖರ್ಚಿನ ನಿರ್ವಹಣೆ ಹೇಗೆ ಎಂಬುದರ ಸ್ಪಷ್ಟತೆಯನ್ನು ಸರಕಾರ/ ಇಲಾಖೆ ನೀಡಿಲ್ಲ. ಸಾಮಾನ್ಯವಾಗಿ ಎನ್ನೆಸ್ಸೆಸ್‌ ಶಿಬಿರ ನಡೆಯುವ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಮಾಹಿತಿ ವಿನಿಮಯಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಹಿಂದೆ ಕೆಲವು ಸಮೀಕ್ಷೆಗಳನ್ನು ನಡೆಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಅನಂತರ ಅದನ್ನು ಕೇಳುವವರು ಇರುವುದಿಲ್ಲ. ಈ ಸಮೀಕ್ಷೆಯೂ ಹಾಗೆ ಆಗದಿರಲಿ ಮತ್ತು ಸರಕಾರದಿಂದ ಇದಕ್ಕೆ ಪೂರಕ ಅನುದಾನವನ್ನೂ ಒದಗಿಸುವಂತಾಗಬೇಕು ಎಂಬುದು ಸ್ವಯಂಸೇವಕರ ಆಗ್ರಹ.

Leave a Reply

error: Content is protected !!
%d bloggers like this: