ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಆಸೀಸ್ ನೀಡಿದ 200 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 41.2 ಓವರ್‌ನಲ್ಲೇ 4 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿ ಗೆಲುವು ಸಾಧಿಸಿದೆ.
ಚೇಸಿಂಗ್ ಆರಂಭಿಸಿದ ಭಾರತ 2ನೇ ಓವರ್‌ನಲ್ಲೇ ಕೇವಲ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿತ್ತು. ಇದರಿಂದ 4ನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಜೋಡಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತ್ತು. 15 ಓವರ್ ಪೂರ್ಣಗೊಂಡರೂ ಭಾರತ 49 ರನ್ ಗಳಿಸಿದ್ದರಿಂದ ಗೆಲವು ಅಸಾಧ್ಯವೆಂದೇ ಭಾವಿಸಲಾಗಿತ್ತು. ಬಳಿಕ ಸಮಯೋಚಿತ ಬ್ಯಾಟಿಂಗ್ ನಿಂದ ಒಂದೊಂದೇ ಬೌಂಡರಿಗಳನ್ನ ಸಿಡಿಸುತ್ತಾ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು.
ಇವರಿಬ್ಬರ ಜೊತೆಯಾಟದಿಂದ ಭಾರತ 35 ಓವರ್‌ಗಳಲ್ಲಿ 151 ರನ್ ಬಾರಿಸಿತ್ತು. 4ನೇ ವಿಕೆಟ್‌ಗೆ ಕೆ.ಎಲ್ ರಾಹುಲ್ ಹಾಗೂ ಕೊಹ್ಲಿ 215 ಎಸೆತಗಳಲ್ಲಿ 165 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 85 ರನ್ ಚಚ್ಚಿ ಶತಕ ವಂಚಿರಾದರು. ಇನ್ನೂ ಕೊನೆಯವರೆಗೂ ಹೋರಾಡಿದ ಕೆ.ಎಲ್ ರಾಹುಲ್ 115 ಎಸೆತಗಳಲ್ಲಿ 97 ರನ್ (8 ಬೌಂಡರಿ, 2 ಸಿಕ್ಸರ್) ಚಚ್ಚಿ ಅಜೇರಾಗುಳಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 11 ರನ್ ಕೊಡುಗೆ ನೀಡಿದರು.
ಆಸೀಸ್ ಪರ ಆರಂಭದಲ್ಲಿ ಮಾರಕ ದಾಳಿ ನಡೆಸಿದ ಜೋಶ್ ಹ್ಯಾಜಲ್‌ವುಡ್ 3 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ 49.3 ಓವರ್‌ಗಳಲ್ಲಿ 199ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಮಚೆಲ್ ಮಾರ್ಷ್ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. 2.2 ಓವರ್‌ನಲ್ಲೇ 5 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಆಸೀಸ್ ಸಂಕಷ್ಟಕ್ಕೀಡಾಯಿತು. ಈ ವೇಳೆ 2ನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಜೋಡಿ, 85 ಎಸೆತಗಳಲ್ಲಿ 69 ರನ್ ಹಾಗೂ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಜೋಡಿ 64 ಎಸೆತಗಳಲ್ಲಿ 36 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿತ್ತು. ಈ ವೇಳೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಆಸೀಸ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆಸೀಸ್ 49.3 ಓವರ್‌ಗಳಲ್ಲಿ 199ರನ್‌ಗಳಿಗೆ ಸರ್ವಪತನ ಕಂಡಿತು.
ಆಸೀಸ್ ಪರ ಡೇವಿಡ್ ವಾರ್ನರ್ 41 ರನ್ (52 ಎಸೆತ, 6 ಬೌಂಡರಿ), ಸ್ಟೀವ್ ಸ್ಮಿತ್ 46 ರನ್ (71 ಎಸೆತ 5 ಬೌಂಡರಿ), ಮಾರ್ನಸ್ ಲಾಬುಶೇನ್ 27 ರನ್, ಗ್ಲೇನ್ ಮ್ಯಾಕ್ಸ್‌ವೆಲ್ 15 ರನ್, ಕ್ಯಾಮರೂನ್ ಗ್ರೀನ್ 8 ರನ್, ಪ್ಯಾಟ್ ಕಮ್ಮಿನ್ಸ್ 15 ರನ್, ಮಿಚೆಲ್ ಸ್ಟಾರ್ಕ್ 28 ರನ್, ಆಡಂ ಝಂಪಾ 6 ರನ್, ಜೋಶ್ ಹ್ಯಾಜಲ್‌ವುಡ್ 1 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರೆ, ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಶೂನ್ಯಕ್ಕೆ ನಿರ್ಗಮಿಸಿದರು.
ಜಡೇಜಾ ಸ್ಪಿನ್ ಜಾದು: ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.